ಮಡಿಕೇರಿ, ಸೆ. ೧೮: ರಾಜಕೀಯ ಬೆಳವಣಿಗೆಗೆ ಪಕ್ಷಗಳು ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡಿ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿವೆ. ಬಹುತ್ವ ಹೊಂದಿರುವ ಭಾರತವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಇತ್ತೀಚಿನ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಸೃಷ್ಟಿಯಾಗುತ್ತಿರುವ ಧರ್ಮ ಸಂಘರ್ಷಗಳಿಗೆ ದೂರ ಮಾಡಲು ಪ್ರತಿಯೋರ್ವರು ಪಣ ತೊಡಬೇಕು. ಅಶಾಂತಿಯನ್ನು ದೂರ ಮಾಡಿ ಎಲ್ಲಾರೂ ಸಹೋದರರಂತೆ ಬದುಕು ನಡೆಸಿ ಶಾಂತಿಯ ದೀಪ ಹಚ್ಚಬೇಕೆಂದು ವಿವಿಧ ಧರ್ಮಗುರು ಗಳು ಸಂದೇಶ ನೀಡಿದರು.
ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ಕೊಡಗು ಬಚಾವೋ ವೇದಿಕೆ ವತಿಯಿಂದ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಶೀರ್ಷಿಕೆಯಡಿ ಜನಜಾಗೃತಿ ಸಮಾವೇಶ ನಡೆಯಿತು.
ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಧರ್ಮಾನಾಥ ನಂದಾಜಿ ಮಹರಾಜ್ ಅವರು ಮಾತನಾಡಿ, ಮತಾಂದತೆಯಿAದ ಸಮಾಜದ ಸ್ವಾಸ್ಥö್ಯ ಹದಗೆಡುತ್ತಿದೆ. ಸ್ವಾರ್ಥಕ್ಕಾಗಿ ಅಶಾಂತಿ ಸೃಷ್ಟಿಯಾಗುತ್ತಿದೆ. ಇದನ್ನು ತಡೆಯಲು ಸಾರ್ವತ್ರಿಕ ಸ್ವೀಕಾರ ಮನೋಭಾವನೆ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ನನ್ನ ಮತ, ಜಾತಿ ಶ್ರೇಷ್ಠ ಎಂಬ ಪ್ರತಿಷ್ಠೆಯಿಂದ ಸಹೋದರತ್ವ ಮರೆಯಾಗಿ ದ್ವೇಷ ಸೃಷ್ಟಿಯಾಗುತ್ತಿದೆ. ಇದು ಜಗತ್ತಿನ ದೊಡ್ಡ ಸಮಸ್ಯೆಯಾಗಿದೆ. ಅಧುನಿಕ ಕಾಲಘಟ್ಟದಲ್ಲೂ ಇದೇ ರೀತಿ ಮುಂದುವರೆಯುತ್ತಿರುವುದು ವಿಷಾದನೀಯ. ರಾಜಕೀಯ ಹಾಗೂ ಧರ್ಮ ಬೇರೆ ಇವೆರೆಡನ್ನು ಒಂದು ಮಾಡಬಾರದು. ಇವೆರಡು ಒಂದಾಗುತ್ತಿರುವುದು ಧರ್ಮ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಧಾರ್ಮಿಕ ಸ್ವಾತಂತ್ರ‍್ಯದಡಿ ನಮ್ಮ ಧರ್ಮವನ್ನು ಪ್ರೀತಿಸುವ ಭರದಲ್ಲಿ ಬೇರೆ ಧರ್ಮವನ್ನು ದೂಷಿಸಬಾರದು. ಉತ್ತಮ ವ್ಯಕ್ತಿತ್ವ ಹೊಂದಲು ಧರ್ಮದ ಅಗತ್ಯ ಇದೆ ಎಂದರು.
ಮಡಿಕೇರಿ ಶಾಂತಿ ಚರ್ಚ್ನ ಧರ್ಮಗುರು ಫಾ. ಅಮೃತರಾಜ್ ಮಾತನಾಡಿ, ರಾಜಕೀಯ ಕೊಡಗನ್ನು ಹಾಳು ಮಾಡುತ್ತಿದೆ. ಧರ್ಮದ ಆಯಾಮ ಇದೀಗ ಬದಲಾಗಿದೆ. ದೇವರ ಹುಡುಕಾಡುವ ಭರದಲ್ಲಿ ದೇವರು ನೆಲೆಸಿರುವ ಜಾಗವನ್ನು ಹಾಳು ಮಾಡುತ್ತಿದ್ದೇವೆ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಮಾತು ಮರೆಯಾಗಿದೆ. ಮಾನವ ಧರ್ಮ ಉಳಿಯಬೇಕು. ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು. ಕೊಡಗಿನಲ್ಲಿ ಹುಟ್ಟುವ ಕಾವೇರಿ ಹರಿದು ಸಮುದ್ರ ಸೇರುತ್ತದೆ. ಹರಿಯುವ ಸಂದರ್ಭ ಸುತ್ತಮುತ್ತಲಿನ ಪರಿಸರವನ್ನು ಸಮೃದ್ಧಿಗೊಳಿಸುತ್ತದೆ. ಅತೀ ಆಸೆಯಿಂದ ಪರಿಸರ ನಾಶವಾಗುತ್ತಿದೆ. ಅಭಿವೃದ್ಧಿಯೂ ಬೇಕು ಪರಿಸರವೂ ಉಳಿಯಬೇಕು. ಸರ್ವಾಂಗಿಣವಾಗಿ ಕೊಡಗು ರಕ್ಷಣೆಯಾಗಬೇಕು ಎಂದು ಹೇಳಿದರು.
ಸಂತ ಮೈಕಲರ ಚರ್ಚ್ನ ಧರ್ಮಗುರು ಫಾ. ದೀಪಕ್ ಜಾರ್ಜ್ ಮಾತನಾಡಿ, ಶಾಂತಿಯನ್ನು ಸ್ವಾರ್ಥಕ್ಕಾಗಿ ಕಳೆದುಕೊಳ್ಳುತ್ತಿದ್ದೇವೆ. ರಕ್ತ ಎಷ್ಟು ಮುಖ್ಯವೋ ಧರ್ಮವೂ ಅಷ್ಟೆ ಮುಖ್ಯ. ಆದರೆ, ಧರ್ಮದಲ್ಲಿ ಮಾನವೀಯ ಮೌಲ್ಯ ಇರಬೇಕು. ಈ ಬಗ್ಗೆ ಜಾಗೃತಗೊಳ್ಳುವಂತೆ ಕರೆ ನೀಡಿದರು.
ಸುನ್ನಿ ಸ್ಟೂಡೆಂಟ್ ಫೆಡರೇಷನ್ ಜಿಲ್ಲಾಧ್ಯಕ್ಷ ಶಾಫಿ ಸಅದಿ ಮಾತನಾಡಿ, ಧರ್ಮ, ಭಾಷೆ,
(ಮೊದಲ ಪುಟದಿಂದ) ಜಾತಿ ಆಧಾರದಲ್ಲಿ ಸಮಾಜ ಒಡೆದು ಮಾನವ ಧರ್ಮ ಮರೆಯಾಗಿ ಸರ್ವಜನಾಂಗದ ಶಾಂತಿಯ ತೋಟ ಪರಿಕಲ್ಪನೆಗೆ ಧಕ್ಕೆ ಬಂದಿದೆ. ಜಾತ್ಯತೀತ ನೆಲಗಟ್ಟಿನಲ್ಲಿ ಭದ್ರವಾಗಿ ಭಾರತ ನೆಲೆಯೂರಬೇಕು. ಹಲವರು ಭಾರತವನ್ನು ಆಕ್ರಮಿಸಿ ಆಡಳಿತ ನಡೆಸಿದ್ದಾರೆ. ಆದರೆ, ಇಲ್ಲಿನ ಜಾತ್ಯತೀತ ವಿಚಾರವನ್ನು ಮುಟ್ಟಲಾಗಲಿಲ್ಲ. ಇದು ಭಾರತದ ಶಕ್ತಿಯಾಗಿದೆ. ಧರ್ಮ ಸಂಘರ್ಷಕ್ಕೆ ಪೈಪೋಟಿ ನಡೆದರೆ ದೇಶ ಬಲಿಯಾಗುತ್ತದೆ. ದೇಶ ಕೋಮುವಾದಕ್ಕೆ ಬಿಟ್ಟುಕೊಡಬಾರದು. ರಾಜಕೀಯದ ಬಗ್ಗೆ ಪ್ರಬುದ್ಧರಾಗಬೇಕು ಎಂದು ಸಂದೇಶ ನೀಡಿದರು.
ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ತಂಮ್ಲಿಕ್ ಧಾರಿಮಿ ಮಾತನಾಡಿ, ಸಾಮಾಜಿಕ ಜಾಲತಾಣ ಅಶಾಂತಿಗೆ ವೇದಿಕೆಯಾಗಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಸೌಹರ್ದ ಸೃಷ್ಟಿಸಬೇಕು ಎಂದರು.
ಎಸ್.ಕೆ.ಎಸ್.ಎಸ್.ಎಫ್. ಕ್ಯಾಂಪಸ್ ವಿಂಗ್‌ನ ಅಧ್ಯಕ್ಷ ಇಬ್ರಾಯಿಂ ಬಾತಿಷಾ ಶಂಸಿ ಮಾತನಾಡಿ, ಪ್ರತಿ ಧರ್ಮಗ್ರಂಥವೂ ಬೇರೆ ಧರ್ಮವನ್ನು ದ್ವೇಷಿಸಬೇಡಿ ಎನ್ನುತ್ತದೆ. ಆದರೆ, ತಾವು ಅದನ್ನು ಅಳವಡಿಸಿಕೊಳ್ಳದಿರುವುದು ಬೇಸರದ ಸಂಗತಿ ಎಂದು ನುಡಿದರು.
ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಡಾ.ಜೆ.ಸೋಮಣ್ಣ, ಶಾಂತಿ ಹಾಗೂ ಆರೋಗ್ಯಕರ ಸಮಾಜ ಸೃಷ್ಟಿಯಾಗಬೇಕು. ರಾಜಕೀಯ ಶಕ್ತಿಯಿಂದ ವಿಮುಖವಾದರೆ ವ್ಯವಸ್ಥೆ ಹಾಳಾಗುತ್ತದೆ. ಅನ್ಯಾಯ, ಅಸಮಾನತೆಯನ್ನು ಸಹಿಸಿಕೊಂಡು ಒಂದೆ ವ್ಯಕ್ತಿಯನ್ನು ಜನಪ್ರತಿನಿಧಿ ಆಯ್ಕೆ ಮಾಡುತ್ತಿದ್ದರೆ ಪ್ರಗತಿಯ ಹಾಗೂ ಸಮಸಮಾಜ ನಿರ್ಮಾಣ ಅಸಾಧ್ಯ. ಜಾತಿ, ಧರ್ಮ, ಹಣಕ್ಕೆ ಮತ ನೀಡಿದರೆ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ಕೋಮುವಾದ ಯಾರಿಗೂ ಬೇಕಾಗಿಲ್ಲ. ಆದರೆ, ಇದನ್ನು ಮುಂದಿಟ್ಟುಕೊAಡು ಜ್ವಲಂತ ಸಮಸ್ಯೆ ಚರ್ಚೆಯಾಗುತ್ತಿಲ್ಲ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತಿಲ್ಲ. ಜಿಲ್ಲೆಯ ಗಿರಿಜನರ ಸಮಸ್ಯೆ ಕಳೆದ ೨೫ ವರ್ಷಗಳಿಂದ ಸದನದಲ್ಲಿ ಪ್ರಸ್ತಾಪವಾಗಿಲ್ಲ. ಅಧಿಕಾರಕ್ಕಾಗಿ ವಿಷಬೀಜವನ್ನು ಜನಪ್ರತಿನಿಧಿಗಳು ಬಿತ್ತಬಾರದು. ಯುವಜನಾಂಗಕ್ಕೆ ದೇಶದ ರಾಜಕೀಯ ಪರಿಸ್ಥಿತಿ ಬದಲಾಯಿಸುವ ಶಕ್ತಿ ಇದೆ. ಆದರೆ, ಅವರು ದೇಶದ ಸ್ವರೂಪ ಅರ್ಥವಾಗದೆ ಸಮಾಜ ಒಡೆಯಲು ಪರೋಕ್ಷ ಕಾರಣವಾಗಿದ್ದಾರೆ. ಸರ್ವಾಧಿಕಾರ ಧೋರಣೆಯಿಂದ ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ಜಾರಿ ಮಾಡಿದರೆ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುತ್ತದೆ. ಸಮಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕರೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ನಮ್ಮ ಹಸ್ತಕ್ಷೇಪ, ಸ್ವಾರ್ಥ ಇಲ್ಲದಿದ್ದರೆ ಸಮಾಜದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕಾಲಕಾಲಕ್ಕೆ ಪರಿಸ್ಥಿತಿ ಬದಲಾಗುತ್ತಿದೆ. ನಾವು ಪರಸ್ಪರ ತಿಳಿದುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಕೆಲವು ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಆಗು-ಹೋಗುಗಳಲ್ಲಿ ಜನರು ಜೊತೆಗಿರುತ್ತಿದ್ದರು. ಇಂದು ಆ ಪರಿಕಲ್ಪನೆಯೇ ದೂರವಾಗಿದೆ. ಪರಸ್ಪರ ವಿಚಾರ ವಿನಿಮಯವಾಗುತ್ತಿಲ್ಲ. ಬಾಂದವ್ಯ, ಸಾಮರಸ್ಯ ವೃದ್ಧಿಗೆ ಅವಕಾಶ ದೊರೆಯುತ್ತಿಲ್ಲ. ಕೊಡಗಿನ ಹಿತಾಸಕ್ತಿಗೆ ನಾವು ಒಂದಾಗಬೇಕು. ಮಾದಕ ವ್ಯಸನಿಗಳ ವಿರುದ್ಧ ಹೋರಾಡಬೇಕಾಗಿದೆ. ಪರಿಸರ, ಕಾವೇರಿ ಮೂಲಕ್ಕೆ ಧಕ್ಕೆಯಾಗಿದೆ. ಸಮಸಮಾಜ ಎಲ್ಲರಿಗೂ ಬೇಕು. ಅಸ್ಪೃಶ್ಯತೆ ತೊಲಗಬೇಕು. ಅಸೂಯೆ, ದ್ವೇಷ ದೂರವಿಡುವಂತೆ ತಿಳಿಸಿದರು.
ಕೊಡಗು ಬಚಾವೋ ವೇದಿಕೆ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಎಲ್ಲಾ ಸಮುದಾಯದವರು ಸಹೋದರಂತೆ ಬದುಕಿದ ಕೊಡಗಿನ ನೆಲದಲ್ಲಿ ರಾಜಕೀಯ ಪಕ್ಷಗಳು ಭಾವನೆಗಳನ್ನು ಕೆದಕಿ ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಮತಬೇಟೆ ಮಾಡಿ ಕಾರ್ಯಸಾಧನೆಗೆ ಮುಂದಾಗಿ ಕೊಡಗಿನ ಸಮಸ್ಯೆಗಳನ್ನು ಮರೆತಿದ್ದಾರೆ. ಕೊಡಗಿನಲ್ಲಿ ಜನಸಾಮಾನ್ಯರು, ಕಾರ್ಮಿಕರು, ರೈತರು, ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದರೆ. ಜನರು ಇದರಿಂದ ಭ್ರಮನಿರಸನಗೊಂಡಿದ್ದಾರೆ. ರಾಜ್ಯದ ಮೂರು ಪಕ್ಷಗಳಿಗೆ ಕೊಡಗಿನ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಗೆಲ್ಲುವ ಭ್ರಮೆಯಲ್ಲಿದೆ. ಸತತವಾಗಿ ಗೆದ್ದರು ಮಂತ್ರಿ ಮಂಡಲದಲ್ಲಿ ಜಿಲ್ಲೆಯ ಶಾಸಕರಿಗೆ ಸ್ಥಾನ ದೊರಕುವುದಿಲ್ಲ. ಕಾಫಿ ಬೆಳೆಗಾರರು ಕಣ್ಣೀರಿನಲ್ಲಿದ್ದಾರೆ. ಬೆಳೆಗಾರರ ಸಮಸ್ಯೆ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ಯಾವುದೇ ಪಕ್ಷಗಳಿಗೂ ಕೊಡಗಿನ ಹಿತ ಬೇಕಾಗಿಲ್ಲ. ಇಲ್ಲಿರುವ ೨ ಕ್ಷೇತ್ರಗಳಿಂದ ರಾಜಕೀಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬ ಅಸಡ್ಡೆಯಿಂದ ಜಿಲ್ಲೆ ಸರಕಾರದ ಕಡೆಗಣನೆಗೆ ಒಳಗಾಗಿದೆ. ಮೊಟ್ಟೆ ಎಸೆತ ಮಹತ್ತರ ವಿಷಯವಲ್ಲ. ಇಲ್ಲಿನ ಮೂಲ ಸಮಸ್ಯೆಗಳ ಪರಿಹಾರ ವಿಷಯ ವಸ್ತು ಆಗಬೇಕು. ವನ್ಯಜೀವಿ ಮಾನವ ಸಂಘರ್ಷ ಹೆಚ್ಚಳವಾಗುತ್ತಿದೆ. ಮೂಲಭೂತ ಸೌಕರ್ಯ ದೊರೆತ್ತಿಲ್ಲ ಈ ಬಗ್ಗೆ ಸದನದಲ್ಲಿ ಪ್ರಸ್ತಾಪವೇ ಆಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಾಧ್ಯಾಪಕ ಪ್ರೊ. ಡಾ. ಶ್ರೀಧರ್ ಹೆಗ್ಗಡೆ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮ ಸಂಚಾಲಕ ಮೋಹನ್ ಮೌರ್ಯ ಸ್ವಾಗತಿಸಿ, ಇಸಾಖ್ ಖಾನ್ ನಿರೂಪಿಸಿ, ನರೇಂದ್ರ ಕಾಮತ್ ವಂದಿಸಿದರು. ಗುಲಾಬಿ ಜನಾರ್ಧನ್ ಪ್ರತಿಜ್ಞಾವಿಧಿ ಬೋಧಿಸಿದರು.