ಕುಶಾಲನಗರ,ಸೆ.೧೮ : ಕೇರಳ ಸಮಾಜದ ವತಿಯಿಂದ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಸಾಮೂಹಿಕ ಓಣಂ ಆಚರಣೆ ನಡೆಯಿತು. ಕುಶಾಲನಗರದ ಇಂದಿರಾ ಬಡಾವಣೆಯಲ್ಲಿರುವ ಕೇರಳ ಸಮಾಜದಿಂದ ಸಾಂಪ್ರದಾಯಿಕ ಉಡುಗೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಸಮಾಜದ ಬಂಧುಗಳು ಮಹಾಬಲಿ ಚಕ್ರವರ್ತಿಯ ವೇಷಧಾರಿಯನ್ನು ಸಭಾಂಗಣಕ್ಕೆ ಕರೆತಂದರು.

ಬಳಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅಪ್ಪಚ್ಚ ರಂಜನ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಸಮುದಾಯದಲ್ಲಿ ಬಡತನ ರೇಖೆಯಲ್ಲಿರುವ ಜನರಿಗೆ ಸರಕಾರದ ಸವಲತ್ತುಗಳನ್ನು ತಲುಪಿಸುವಂತೆ ನೋಡಿಕೊಳ್ಳುವ ಕೆಲಸ ಸಮಾಜ ಮೂಲಕ ಆಗಬೇಕಾಗಿದೆ ಎಂದರು.

ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಮಲೆಯಾಳಿ ಬಾಂಧವರು ಜಾತ್ಯಾತೀತವಾಗಿ ಕುಶಾಲನಗರದಲ್ಲಿ ಸಮಾಜವನ್ನು ಕಟ್ಟಿಬೆಳೆಸಿ ಪ್ರತೀ ವರ್ಷ ಓಣಂ ಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಕೊಡಗು ಜಿಲ್ಲಾ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯ್ ಮಾತನಾಡಿ, ಎಲ್ಲಾ ಜಾತಿ ಧರ್ಮಗಳಿಗೆ ಸೇರಿದ ಮಲೆಯಾಳಿ ಭಾಷಿಕರು ಮತ್ತಷ್ಟು ಸಂಘಟಿತರಾಗುವ ಮೂಲಕ ಸಾಮೂಹಿಕ ಓಣಂ ಸಾಂಪ್ರದಾಯಿಕ ಆಚರಣೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಅಚ್ಚುಕಟ್ಟಾಗಿ ಆಚರಿಸಬೇಕಿದೆ ಎಂದರು.

ಕೇರಳ ಸಮಾಜದ ಅಧ್ಯಕ್ಷ ಕೆ.ಆರ್. ಶಿವಾನಂದನ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಕೆ.ಬಾಬು, ಪದಾಧಿಕಾರಿಗಳಾದ ಕೆ.ಜೆ.ರಾಬಿನ್, ಅಜಿತ್, ಬಿ.ಸಿ. ಆನಂದ್, ಐ.ಡಿ.ರಾಯ್, ರವೀಂದ್ರನ್, ಎ.ಕೆ.ವೇಣು, ಎಂ.ಜಿ.ಪ್ರಕಾಶ್, ವಿ ಕೃಷ್ಣ, ಬಾಲಕೃಷ್ಣನ್, ಸುಶೀಲ ಮೊದಲಾದವರಿದ್ದರು.

ಸಮಾಜದ ಒಳಿತಿಗೆ ದುಡಿದ ಹಿರಿಯರಾದ ಕೆ. ಥಾಮಸ್, ಶಶಿಧರ್, ರಾಮಣ್ಣ ಪೂಜಾರಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಶ್ರೀಜಾ ರಾಜೇಶ್ ಪ್ರಾರ್ಥಿಸಿದರು. ಕೆ. ರಾಜನ್ ಸ್ವಾಗತಿಸಿದರು. ಶ್ರೀಷಾ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಹೂವಿನ ರಂಗೋಲಿ ಸ್ಪರ್ಧೆ ನಡೆಯಿತು.