ಮಡಿಕೇರಿ, ಸೆ. ೧೮: ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಇದೇ ತಿಂಗಳು ಬೆಂಗಳೂರಿನಲ್ಲಿ ಪ್ರಾರಂಭಗೊಳ್ಳುತ್ತಿರುವ ರಾಜ್ಯದ ಪ್ರತಿಷ್ಠಿತ ಫುಟ್ಬಾಲ್ ಲೀಗ್ ಗಳಲ್ಲಿ ಒಂದಾದ ‘ಯೂತ್ ಲೀಗ್’ನಲ್ಲಿ ಕೊಡಗಿನ ಯುವ ಫುಟ್ಬಾಲ್ ಆಟಗಾರರು ಭಾಗವಹಿಸಲಿದ್ದಾರೆ.

ಅಂಡರ್ ೧೩ ಹಾಗೂ ೧೫ ಫುಟ್ಬಾಲ್ ಆಟಗಾರರ ವಿಭಾಗದಲ್ಲಿ ನಕ್ಷತ್ರ ಎಫ್.ಸಿ ಪರವಾಗಿ ಜಿಲ್ಲೆಯ ಉದಯೋನ್ಮುಖ ಪ್ರತಿಭೆಗಳು ಭಾಗವಹಿಸುತ್ತಿರುವುದು ಜಿಲ್ಲೆಯ ಫುಟ್ಬಾಲ್ ಬೆಳವಣಿಗೆಗೆ ಸಿಕ್ಕ ಮತ್ತೊಂದು ಮೈಲುಗಲ್ಲಾಗಿದೆ.

ಪ್ರತಿಷ್ಠಿತ ಯೂತ್ ಲೀಗ್

ಚಿಕ್ಕ ವಯಸ್ಸಿನಿಂದಲೇ ಫುಟ್ಬಾಲ್ ಆಟಗಾರರಿಗೆ ಅವಕಾಶ ನೀಡಿ, ಅತ್ಯುತ್ತಮ ಫುಟ್ಬಾಲ್ ಪಟುಗಳನ್ನಾಗಿ ರೂಪುಗೊಳಿಸಲು ಪ್ರತಿ ವರ್ಷ ರಾಜ್ಯ ಫುಟ್ಬಾಲ್ ಸಂಸ್ಥೆ ಪ್ರತಿಷ್ಠಿತ ಲೀಗ್‌ಗಳಲ್ಲಿ ಒಂದಾದ ಯೂತ್ ಲೀಗ್ ಅನ್ನು ಆಯೋಜಿಸುತ್ತಿದ್ದಾರೆ. ಪ್ರತ್ಯೇಕ ವಯೋಮಾನದ ಆಟಗಾರರನ್ನು ವಿಂಗಡಿಸಿ ಯೂತ್ ಲೀಗ್ ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುತ್ತದೆ.

ನಕ್ಷತ್ರ ಎಫ್.ಸಿ ತಂಡದ ಪರವಾಗಿ ಆಡುತ್ತಿರುವ ಕೊಡಗಿನ ಫುಟ್ಬಾಲ್ ತಾರೆಗಳು ಅಂಡರ್ ೧೩ ಹಾಗೂ ೧೫ ವಿಭಾಗದಲ್ಲಿ ಆಡಲಿದ್ದಾರೆ.

ಅಂಡರ್ ೧೩ ವಿಭಾಗದಲ್ಲಿ ಮೂರು ಹಾಗೂ ಅಂಡರ್ ೧೫ ವಿಭಾಗದಲ್ಲಿ ಜಿಲ್ಲೆಯ ಏಳು ಆಟಗಾರರು ಈ ಬಾರಿ ಯೂತ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ೧೩ ಹಾಗೂ ೧೫ ವರ್ಷ ವಯೋಮಾನದ ಯೂತ್ ಲೀಗ್‌ನಲ್ಲಿ ರಾಜ್ಯದ ವಿವಿಧ ಕ್ಲಬ್‌ಗಳು ಸೇರಿ ಒಟ್ಟು ೫೨ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ.

ಕಳೆದ ವರ್ಷ ಅಂಡರ್ ೧೭

ನಕ್ಷತ್ರ ಅಕಾಡೆಮಿ ಸಂಸ್ಥಾಪಕ ಪಾಲಿಬೆಟ್ಟ ಕ್ಯಾಪ್ಟನ್-೧೧ ತಂಡದ ಮಾಜಿ ಆಟಗಾರ ಎಚ್.ಎಚ್. ಹರೀಶ್ ಕಳೆದ ವರ್ಷ ಜಿಲ್ಲೆಯ ೧೫ ಆಟಗಾರರಿಗೆ, ಅಂಡರ್ ೧೭ ವಿಭಾಗದಲ್ಲಿ ಯೂತ್ ಲೀಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು.

ಅತ್ಯುತ್ತಮ ಪ್ರದರ್ಶನ ನೀಡಿದ ನಕ್ಷತ್ರ ಎಫ್.ಸಿ ತಂಡದ ಕೊಡಗಿನ ನಾಲ್ವರು ಆಟಗಾರರಿಗೆ ಪ್ರತಿಷ್ಠಿತ ಸೂಪರ್ ಡಿವಿಷನ್ ಕ್ಲಬ್‌ವೊಂದರಲ್ಲಿ ತರಬೇತಿ ಹಾಗೂ ಉಚಿತ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ನಕ್ಷತ್ರ ಎಫ್.ಸಿ. ಸಂಸ್ಥಾಪಕ ಹರೀಶ್ ಮಾಡಿಕೊಟ್ಟು, ಜಿಲ್ಲೆಯ ಕ್ರೀಡಾಪ್ರೇಮಿಗಳ ಮನಗೆದ್ದಿದ್ದರು.

ಮರುಜೀವ ತುಂಬಿದ ನಕ್ಷತ್ರ ಎಫ್.ಸಿ ಹಾಗೂ ಯುನೈಟೆಡ್ ಕೊಡಗು ಎಫ್.ಸಿ.

ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಫುಟ್ಬಾಲ್ ಕ್ಲಬ್ ಅನ್ನು ಹರೀಶ್ ಹುಟ್ಟು ಹಾಕಿದ್ದರು. ಯೂತ್ ಲೀಗ್‌ನಲ್ಲಿ ಭಾಗವಹಿಸುತ್ತಿರುವ ಯುವ ಫುಟ್ಬಾಲ್ ಪಟುಗಳಿಗೆ ಎಲ್ಲಾ ರೀತಿಯ ವಸತಿ ಸೌಲಭ್ಯಗಳನ್ನು ನಕ್ಷತ್ರ ಅಕಾಡೆಮಿ ಕಲ್ಪಿಸಿಕೊಟ್ಟಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ