ಗೋಣಿಕೊಪ್ಪಲು, ಸೆ. ೧೬: ಕೊಡಗಿನ ಕಾಫಿ ಬೆಳೆಗಾರರ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಮೈಸೂರು ಸೆಸ್ಕ್ ಪ್ರಧಾನ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ರೈತರು ತಮ್ಮ ಪಂಪ್ ಸೆಟ್ಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್ಗಳನ್ನು ಅಧಿಕಾರಿಗಳಿಗೆ ವಾಪಸ್ಸು ಮಾಡಿದರು. ಅಲ್ಲದೆ ಸರ್ಕಾರ ಹೊರಡಿಸಿರುವ ಆದೇಶವನ್ನು ಅಧಿಕಾರಿಗಳ ಮುಂದೆ ಸುಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. ಪ್ರತಿಭಟನೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಕೊಡಗಿನ ರೈತರಿಗೆ ಸರ್ಕಾರವು ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತ ಬಂದಿದೆ ವರ್ಷದಲ್ಲಿ ಮೂರು ತಿಂಗಳು ಮಾತ್ರ ಕೊಡಗಿನ ರೈತರು ತಮ್ಮ ಪಂಪ್ ಸೆಟ್ಗಳಿಗೆ ವಿದ್ಯುತ್ನ್ನು ಬಳಸುತ್ತಾರೆ. ಉಳಿದ ಸಮಯದಲ್ಲಿ ರೈತರು ವಿದ್ಯುತ್ ಬಳಸುತ್ತಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ರೈತರ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಲಭ್ಯವಾಗುತ್ತಿದೆ. ಕೊಡಗು ಜಿಲ್ಲೆ ರೈತರು ಇದರಿಂದ ವಂಚಿತರಾಗಿದ್ದಾರೆ. ಕಳೆದ ೪ ವರ್ಷಗಳಿಂದ ಪ್ರಕೃತಿ ವಿಕೋಪ ಸೇರಿದಂತೆ ಮಳೆ ಹಾನಿಯಿಂದ ರೈತರು ಕಂಗೆಟ್ಟಿದ್ದಾರೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಮೂರು ತಿಂಗಳು ನೀಡುವ ವಿದ್ಯುತ್ ವಿಚಾರದಲ್ಲಿ ಸರ್ಕಾರ ಹಲವು ಕಾರಣಗಳನ್ನು ನೀಡುತ್ತಾ ಕೊಡಗಿನ ರೈತರ ತಾಳ್ಮೆಯನ್ನು ಪರಿಕ್ಷೀಸುತ್ತಿದೆ. ಯಾವುದೇ ಕಾರಣಕ್ಕೂ ಉಚಿತ ವಿದ್ಯುತ್ ಪಡೆಯದೆ ರೈತರು ತೆರಳುವುದಿಲ್ಲ. ಸರ್ಕಾರ ಈ ಬಗ್ಗೆ ವಿಶೇಷವಾಗಿ ಗಮನ ಹರಿಸಿ ೧೦ ಹೆಚ್.ಪಿ ಒಳಗಿನ ರೈತರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ವಿಶೇಷ ಕ್ರಮ ವಹಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರೈತರನ್ನು ಉದ್ದೇಶಿಸಿ ಮಾತನಾಡಿ ಕೊಡಗಿನ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಾಂಕೇತಿಕವಾಗಿ ಪ್ರತಿಭಟನೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೊಡಗಿನ ರೈತ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ವಿಭಿನ್ನವಾದ ಪ್ರತಿಭಟನೆ ಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತರಿಗೆ ಕನಿಷ್ಟ ೧೨ ಗಂಟೆ ಹಗಲು ೩ ಪೇಸ್ ವಿದ್ಯುತ್ ಕೊಡಬೇಕು. ಕಾಫಿ ಬೆಳೆಗಾರರ ಕುಟುಂಬದ ಎಲ್ಲಾ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಕೃಷಿ ಪಂಪ್ ಸೆಟ್ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಬೇಕು. ರಾಜ್ಯದ ಎಲ್ಲ ರೈತರ ವಿದ್ಯುತ್ ಬಾಕಿ ಮನ್ನಾ ಮಾಡಬೇಕು. ಸೇರಿದಂತೆ ಇನ್ನು ಹಲವು ಬೇಡಿಕೆಗಳನ್ನು ಮುಂದಿಟ್ಟು ಸೆಸ್ಕ್ನ ಎಂ.ಡಿ. ಜಯವಿಭವ ಸ್ವಾಮಿ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮೈಸೂರು ಭಾಗದ ರೈತ ಸಂಘದ ಪ್ರಮುಖರಾದ ಹೊಸಕೋಟೆ ಬಸವರಾಜ್ ಪ್ರಸನ್ನಗೌಡ, ಮಹೇಶ್ ಪ್ರಭು, ಸಿದ್ದರಾಜು, ಮಹದೇವಪ್ಪ, ಬಸವರಾಜು, ಶಿವರಾಮ್ ಸೇರಿದಂತೆ ಕೊಡಗು ಜಿಲ್ಲಾ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಖಜಾಂಚಿ ಇಟ್ಟಿರ ಸಭಿತ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್, ಕಿರುಗೂರು ಭಾಗದ ತೀತರಮಾಡ ರಾಜ, ಮಾಯಮುಡಿಯ ಪುಚ್ಚಿಮಾಡ ರಾಯ್ ಮಾದಪ್ಪ, ಶ್ರೀಮಂಗಲ ಹೋಬಳಿಯ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ, ತಾಲೂಕು ಅಧ್ಯಕ್ಷರಾದ ಬಾಚಮಾಡ ಭವಿಕುಮಾರ್, ಕವಿತ ರಾಮು, ಗಿರೀಶ್, ಚೊಟ್ಟೆಕಾಳಪಂಡ ಮನು, ಚೇರಂಡ ಜಗನ್ ಸೋಮವಾರಪೇಟೆಯ ಹೋವಯ್ಯ, ಲಕ್ಷö್ಮಣ, ದಿನೇಶ್, ಅಶೋಕ್, ಸಂದೀಪ್, ರೋಶನ್, ಸೇರಿದಂತೆ ವಿವಿಧ ಭಾಗದ ರೈತ ಮುಖಂಡರು ಭಾಗವಹಿಸಿದ್ದರು. -ಹೆಚ್.ಕೆ. ಜಗದೀಶ್