ಶ್ರೀಮಂಗಲ, ಸೆ. ೧೬: ಪೊನ್ನಂಪೇಟೆಯ ಇಗ್ಗುತ್ತಪ್ಪ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್(ಸಹಕಾರ ಸಂಘ) ೨೦೨೧-೨೨ ಸಾಲಿನಲ್ಲಿ ರೂ.೨೧.೪೩ ಲಕ್ಷ ಲಾಭಗಳಿಸಿದ್ದು, ಸಂಸ್ಥೆಯು ೧೬೮೯ ಸದಸ್ಯರನ್ನು ಹೊಂದಿದ್ದು, ಸಂಘವು ರೂ. ೭೧ ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. ಇದುವರೆಗೆ ಸಂಘವು ಪೊನ್ನಂಪೇಟೆ ಹಾಗೂ ಗೋಣಿಕೊಪ್ಪದಲ್ಲಿ ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಟಿ.ಶೆಟ್ಟಿಗೇರಿ ಮತ್ತು ಅಮ್ಮತ್ತಿಯಲ್ಲಿ ಹೊಸ ಶಾಖೆಯನ್ನು ಆರಂಭಿಸುವ ಚಿಂತನೆಯನ್ನು ಆಡಳಿತ ಮಂಡಳಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಅರಮಣಮಾಡ ಎಸ್.ಬೋಪಯ್ಯ ವಿವರಿಸಿದರು.

ಪೊನ್ನಂಪೇಟೆಯ ಸಂಘದ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು ಸಂಘದ ವಾರ್ಷಿಕ ಮಹಾಸಭೆ ತಾ.೧೯ ರಂದು ಪೊನ್ನಪೇಟೆ ಸಂಘದ ಸಭಾಂಗಣದಲ್ಲಿ ನಡೆಸಲಾಗುತ್ತದೆ ಈ ಸಂದರ್ಭ ಸದಸ್ಯರಿಗೆ ಶೇ. ೧೨ರ ಡೆವಿಡೆಂಟನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಸಂಘವು ನಿರಖು ಠೇವಣಿ ಸಂಚಯ ಠೇವಣಿ, ದೈನಂದಿನ ಠೇವಣಿ, ಮಿತವ್ಯಯ ಠೇವಣಿ ಹೀಗೆ ವಿವಿಧ ರೀತಿಯ ಠೇವಣಿಯಾಗಿ ರೂ.೧೭.೮೬ ಕೋಟಿ ಠೇವಣಿ ಹೊಂದಿದೆ. ಹಾಗೆಯೇ ವಿವಿಧ ರೀತಿಯ ಸಾಲಗಳು ಅಂದರೆ ವ್ಯವಸಾಯ ಅಭಿವೃದ್ಧಿ ಸಾಲ, ಆಭರಣ ಸಾಲ, ಗೃಹ ನಿರ್ಮಾಣ ಸಾಲ, ವಾಹನ ಸಾಲ, ಕೃಷಿ ಯಂತ್ರೋಪಕರಣ ಸಾಲವನ್ನು ರೂ.೧೬ ಕೋಟಿ ವಿತರಿಸಿದೆ ಎಂದು ವಿವರಿಸಿದರು.

ಪೊನ್ನಂಪೇಟೆ ಹೃದಯ ಭಾಗದಲ್ಲಿ ಸ್ವಂತ ಕಟ್ಟಡವನ್ನು ಹೊಂದಿರುವ ಸಂಘವು, ಸಂಘದ ಸದಸ್ಯರು ಮರಣ ನಿಧಿ ರೂ.೧೦ ಸಾವಿರ ಹಾಗೂ ಸಹಕಾರಿ ಜೀವ ನಿಧಿ ರೂ.೧ ಲಕ್ಷ ಅವರ ನಾಮಿನಿಗೆ ಕೊಡಲಾಗುವುದು ಎಂದು ಹೇಳಿದರು.

ಅಲ್ಲದೆ ಸಾಲಗಾರರ ಹಿತ ದೃಷ್ಟಿಯಿಂದ ಸಾಲಗಾರನು ಸಾಲ ಪಡೆದು ಸುಸ್ತಿಯಾಗದೆ ಮೃತಪಟ್ಟಲ್ಲಿ ಸಾಲಗಾರರ ಕ್ಷೇಮಾಭಿವೃದ್ಧಿ ನಿಧಿಯಿಂದ ನಿಬಂಧನೆಗೆ ಒಳಪಟ್ಟು ರೂ.೧ ಲಕ್ಷ ಮಿತಿಯೊಳಗೆ ಸಾಲ ಮನ್ನಾ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ರೂ.೨.೧೨ ಲಕ್ಷ ಸಾಲವನ್ನು ಮೃತಪಟ್ಟ ೫ ಸಾಲಗಾರ ಸದಸ್ಯರ ಸಾಲ ಮನ್ನಾ ಮಾಡಲಾಗಿದೆ ಎಂದು ಅವರು ತಿಳಿಸಿದರು. ಇಂತಹ ಸೌಲಭ್ಯ ಯಾವುದೇ ಸಹಕಾರಿ ಸಂಘಗಳಲ್ಲಿ ಇಲ್ಲ, ನಮ್ಮ ಸಂಘದಲ್ಲಿ ಮಾತ್ರ, ಸದಸ್ಯರ ಮತ್ತು ಅವರ ಕುಟುಂಬದ ಹಿತದೃಷ್ಟಿಯಿಂದ ಅಳವಡಿಸಿ ಕೊಂಡಿರುವ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು.

ಸಂಸ್ಥೆಯ ಲೆಕ್ಕಪತ್ರಗಳನ್ನು ಆಧುನಿಕವಾಗಿ ಗಣಕೀಕರಣ ಗೊಳಿಸಲಾಗಿದೆ. ಸದಸ್ಯರಿಗೆ ಇನ್ನಿತರ ಸೇವಾ ಸೌಲಭ್ಯಗಳನ್ನು ಲಾಕರ್ ಸೌಲಭ್ಯ, ಇ ಸ್ಟಾ÷್ಯಂಪ್, ಮೊಬೈಲ್- ಟಿವಿ ರಿಚಾರ್ಜ್, ರೈಲ್ವೆ ಬುಕಿಂಗ್, ಆರ್.ಟಿ.ಸಿ. ಸೇವಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯಲ್ಲಿ ೬ ಜನ ಪಿಗ್ಮಿ ಸಂಗ್ರಹಕಾರರಿದ್ದು, ಸಂಸ್ಥೆಯ ಗೋಣಿಕೊಪ್ಪ ಶಾಖೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರೂ.೯.೨೮ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಚಿರಿಯಪಂಡ ಕೆ. ಕಾಶಿಯಪ್ಪ, ನಿರ್ದೇಶಕರುಗಳಾದ ಎಂ.ಕೆ. ಸೋಮಯ್ಯ, ಕೆ.ಜಿ. ಭೀಮಯ್ಯ, ಕೆ.ಎಂ. ಚಿದಂಬರ, ಕೆ.ಜಿ. ಕುಶಾಲಪ್ಪ, ಎಂ.ಸಿ. ಪ್ರಕಾಶ್, ಐ.ಕೆ. ಮಂದಣ್ಣ, ಕೆ.ಡಿ. ಪೂಣಚ್ಚ, ಜಿ.ಜಿ. ಗಂಗಮ್ಮ, ಸಿ.ಪಿ. ಆಶಾ, ಕೆ.ಎಸ್. ಸುರೇಶ್, ಕೆ.ಎನ್. ಕಾವೇರಪ್ಪ, ಎಂ.ಜೆ. ಪಾರ್ವತಿ ಹಾಗೂ ಸಿ.ಇ.ಓ ಮದ್ರಿರ ಗಣಪತಿ ಹಾಜರಿದ್ದರು.