ಶನಿವಾರಸಂತೆ, ಸೆ. ೧೫: ಸಮೀಪದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರಾ ಮೈದಾನದ ಕಲಾ ಮಂದಿರದ ವೇದಿಕೆಯಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ತ್ಯಾಜ್ಯ ಸಂಗ್ರಹಿಸಿರುವುದನ್ನು ಕ.ರ.ವೇ. ಕಾರ್ಯಕರ್ತರು ಹಾಗೂ ಶಿರಂಗಾಲ ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿ ಪಂಚಾಯಿತಿ ವತಿಯಿಂದ ತೆರವುಗೊಳಿಸಲು ಆಗ್ರಹಿಸಿದ ಘಟನೆ ನಡೆದಿದೆ.

ವೇದಿಕೆಯಲ್ಲಿ ಸಂಗ್ರಹಿಸುತ್ತಿರುವ ಕೊಳೆತ ತ್ಯಾಜ್ಯದಿಂದ ದುರ್ವಾಸನೆ ಹರಡುತ್ತಿದ್ದು, ಬೀದಿ ನಾಯಿಗಳ ಹಾವಳಿಯೂ ಇದ್ದು, ರಸ್ತೆಯಲ್ಲಿ ತಿರುಗಾಡುವ ಪಾದಚಾರಿಗಳು, ವಿದ್ಯಾರ್ಥಿಗಳು ಹಾಗೂ ಸುತ್ತ ಮುತ್ತಲಿನ ಮನೆಗಳಲ್ಲಿ ವಾಸಿಸುತ್ತಿರುವವರು ಮೂಗುಮುಚ್ಚಿ ಜೀವನ ಸಾಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪಕ್ಕದ ಶಿರಂಗಾಲ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಸ್ಪಂದಿಸದ ಕಾರಣ ಗ್ರಾಮಸ್ಥರು ಕ.ರ.ವೇ. ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯಕರ್ತರಿಗೆ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಕ.ರ.ವೇ. ಕಾರ್ಯಕರ್ತರು ತ್ಯಾಜ್ಯ ಸಂಗ್ರಹವನ್ನು ಪರಿಶೀಲಿಸಿದರು. ದೂರವಾಣಿ ಮೂಲಕ ಹಂಡ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಮಿತಾ ಅವರಿಗೆ ವಿಷಯ ತಿಳಿಸಿ, ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಧಾವಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಮಿತಾ ಹಾಗೂ ಸದಸ್ಯ ವೀರೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಕ.ರ.ವೇ. ಕಾರ್ಯಕರ್ತರು ಹಾಗೂ ಗ್ರಾಮಸ್ಥರು ತಕ್ಷಣ ಸಂಗ್ರಹಿಸಿದ ತ್ಯಾಜ್ಯವನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ೧ ಗಾಡಿಯನ್ನು ಮಾಡಿ ತ್ಯಾಜ್ಯ ತುಂಬಿಸಿ ಗ್ರಾಮ ಪಂಚಾಯಿತಿ ಮುಂದೆ ಸುರಿಯುತ್ತೇವೆ ಎಂದು ಎಚ್ಚರಿಸಿದರು. ಮಣಿದ ಪಂಚಾಯಿತಿ ಅಧಿಕಾರಿ ಸ್ಮಿತಾ ಹಾಗೂ ಸದಸ್ಯ ವೀರೇಂದ್ರ ತ್ಯಾಜ್ಯವನ್ನು ತಕ್ಷಣ ತೆರವುಗೊಳಿ ಸುವುದಾಗಿ ಭರವಸೆ ನೀಡಿದರು.

ಕ.ರ.ವೇ. (ಶಿವರಾಮೇ ಗೌಡ ಬಣ) ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್, ಸದಸ್ಯ ರಂಜಿತ್, ಪಂಚಾಯಿತಿ ಮಾಜಿ ಸದಸ್ಯರಾದ ಉಮೇಶ್, ಷಂಶುದ್ದೀನ್, ಅದ್ರಾಮ್, ಅಬ್ಬಾಸ್, ರಾಜಣ್ಣ, ವಸಂತ್, ನಿಡ್ತ ಗ್ರಾಮ ಪಂಚಾಯಿತಿ ಸದಸ್ಯರಾದ ಮನು, ಅಶ್ರಫ್, ಮೊಯ್ದು, ಆನಂದ, ಲೋಹಿತ್, ಅಬ್ದುಲ್ ಹಾಜರಿದ್ದರು.