ಚಿತ್ರ ವರದಿ: ವಾಸು ಎ.ಎನ್ ಸಿದ್ದಾಪುರ, ಸೆ. ೧೫: ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿದ್ದ ಹುಲಿಯು ಕಾರ್ಯಾಚರಣೆ ತಂಡದಿAದ ತಪ್ಪಿಸಿಕೊಂಡು ಕಾಡಿನಲ್ಲಿ ಸೇರಿಕೊಂಡಿದೆ. ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ ಸಮೀಪ ಹುಲಿಯು ಪ್ರತ್ಯಕ್ಷಗೊಂಡಿದ್ದು, ಈ ಹಿನ್ನೆಲೆಯಲ್ಲಿ ಹುಲಿ ಕಾರ್ಯಾಚರಣೆ ತಂಡವು ಅರವಳಿಕೆ ಚುಚ್ಚು ಮದ್ದನ್ನು ಪ್ರಯೋಗಿಸಿತು. ಹುಲಿಯು ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ಮುಖ್ಯ ರಸ್ತೆಯ ಮೂಲಕ ಸಾಗಿ ಸಮೀಪದ ಅರಣ್ಯ ಪ್ರದೇಶದೊಳಗೆ ಕಣ್ಮರೆಯಾಗಿದೆ.
ಬಾಡಗ ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಹಾಗೂ ಘಟ್ಟದಳದ ಕಾಫಿ ತೋಟಗಳಲ್ಲಿ ಹುಲಿಯೊಂದು ಬೀಡುಬಿಟ್ಟು ಜಾನುವಾರುಗಳ ಮೇಲೆ ಧಾಳಿ ನಡೆಸಿ ಕೊಂದು ಹಾಕುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ದುಬಾರೆಯ ಸಾಕಾನೆಗಳ ಶಿಬಿರದಿಂದ ನಾಲ್ಕು ಸಾಕಾನೆಗಳ ಮೂಲಕ ಬಾಡಗ ಬಾಣಂಗಾಲ ಗ್ರಾಮದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ತಂಡವು ಬಾಡಗ ಬಾಣಂಗಾಲ ಗ್ರಾಮದ ಮಾರ್ಗೊಲ್ಲಿ ಹಾಗೂ ಮೊಳಗುಮನೆ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟದೊಳಗೆ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಸೇರಿ ಹಗಲಿರುಳು ಕಾರ್ಯಾಚರಣೆ ನಡೆಸಿದರು. ಈತನ್ಮಧ್ಯೆ ಘಟ್ಟದಳ ಸರ್ಕಾರಿ ತಮಿಳು ಶಾಲೆಯ ಸಮೀಪದಲ್ಲಿ ಬುಧವಾರದಂದು ಹುಲಿಯು ಹಾಡಹಗಲೇ ಸಾರ್ವಜನಿಕರ ಎದುರು ಕಾಣಿಸಿಕೊಂಡು ಹಸುವೊಂದನ್ನು ಸಾಯಿಸಿತ್ತು. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದರು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿದರು. ನಾಲ್ಕು ಸಾಕಾನೆಗಳ ನೆರವಿನಿಂದ ಅರಣ್ಯ ಸಿಬ್ಬಂದಿಗಳು ಸೇರಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಹುಲಿಯು ಗುರುವಾರದಂದು ಪೂರ್ವಾಹ್ನ ಪತ್ತೆಯಾಯಿತು. ಕೂಡಲೇ ವನ್ಯ ಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಹಾಗೂ ಶೂಟರ್ ಕನ್ನಂಡ ರಂಜನ್ ಸೇರಿ ಹುಲಿಗೆ ಅರವಳಿಕೆ ಚುಚ್ಚುಮದ್ದನ್ನು ಪ್ರಯೋಗಿಸಿದರು.
ಈ ಸಂದರ್ಭದಲ್ಲಿ ಹುಲಿಯು ಕಾಫಿ ತೋಟದ ಒಳಗಿನಿಂದ ಓಡಿ ಹೋಗಿ ಸಮೀಪದ ಮಾಲ್ದಾರೆ ವ್ಯಾಪ್ತಿಯ ಅರಣ್ಯ ಪ್ರದೇಶದ ಒಳಗೆ ಸೇರಿತು. ಆದರೂ ಕೂಡ ಕಾರ್ಯಾಚರಣಾ ತಂಡದವರು ಸುಮಾರು ದೂರದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಹುಲಿಯನ್ನು ಸೆರೆ ಹಿಡಿಯಲು ಕೆಸರಿನ ಮಧ್ಯೆ ಶತಾಯಗತಾಯ ಪ್ರಯತ್ನ ನಡೆಸಿದರು. ಆದರೆ ಹುಲಿಯು ತನ್ನ ವೇಗವನ್ನು ಹೆಚ್ಚಿಸಿಕೊಂಡು ಕಣ್ಮರೆಯಾಯಿತು.
ಕಾರ್ಯಾಚರಣೆ ತಂಡವು ಹುಲಿಯನ್ನು ಹಿಂಬಾಲಿಸಿಕೊAಡು ಬಹು ದೂರದವರೆಗೆ ಹೋದರೂ ಕೂಡ ಹುಲಿಯು ಪತ್ತೆಯಾಗದೇ ನಾಪತ್ತೆಯಾಯಿತು. ಹುಲಿಯನ್ನು ಪತ್ತೆ ಹಚ್ಚುವಲ್ಲಿ ಕಾರ್ಯಾಚರಣೆ ತಂಡ ಯಶಸ್ವಿಯಾದರೂ ಕೂಡ ಹುಲಿ ಸೆರೆಯಾಗದಿರುವುದು ಸಮಸ್ಯೆಯಾಗಿದೆ. ಆದರೂ ಕೂಡ ಛಲ ಬಿಡದ ಕಾರ್ಯಾಚರಣೆ ತಂಡವು ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರೆಸಿದರು. ಅರಣ್ಯ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಸೇರಿ ಕಾರ್ಯಾಚರಣೆಯಲ್ಲಿ ೫೦ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ವೀರಾಜಪೇಟೆ ತಾಲೂಕು ಡಿ.ಸಿ.ಎಫ್ ಶಿವರಾಂ ಬಾಬು, ಎ.ಸಿ.ಎಫ್ ನೆಹರೂ ಹಾಗೂ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ, ಸಿದ್ದಾಪುರ ಠಾಣಾಧಿಕಾರಿ ಮೋಹನ್ರಾಜ್ ಹಾಗೂ ಇನ್ನಿತರರು ಭಾಗವಹಿಸಿದ್ದರು.