ವೀರಾಜಪೇಟೆ, ಸೆ. ೧೫: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಪೈಸಾರಿಯ ಜನರ ಶೋಚನೀಯ ಬದುಕಿನ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಬಾರಿಕಾಡು ಪೈಸಾರಿಗೆ ಪ್ರೊ. ಹೆಚ್. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕಿ ಗಾಯಿತ್ರಿ ನರಸಿಂಹ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದರು.
ಸತತ ನಾಲ್ಕು ವರ್ಷಗಳಿಂದ ಮೃಗಗಳಿಗಿಂತ ಕಡೆಯಾಗಿ ಪ್ಲಾಸ್ಟಿಕ್ ಹೊದಿಕೆಯೊಳಗಡೆ ಜೀವನ ಸಾಗಿಸುತ್ತಾ ಬಂದಿದ್ದಾರೆ. ಮಳೆ-ಗಾಳಿಗೆ ಎಲ್ಲರೂ ರೋಗಪೀಡಿತರಾಗಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ, ತಾಲೂಕು ಆಡಳಿತ ಇವರಿಗೆ ಸೂಕ್ತ ವ್ಯವಸ್ಥೆ ಮಾಡದೇ ಜಾಣಮೌನ ಪ್ರದರ್ಶನ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಈ ಜನರು ತಮ್ಮದೇ ನೆಲದಲ್ಲಿ ಹಕ್ಕುಗಳಿಂದ ವಂಚಿತವಾಗುತ್ತಿದ್ದಾರೆ. ಇದಕ್ಕೆ ಸಧ್ಯದಲ್ಲಿಯೇ ರಾಜ್ಯಮಟ್ಟದ ಹೋರಾಟ ರೂಪಿಸಲಾಗುವುದು ಎಂದರು.
ಈ ಸಂದರ್ಭ ನಿವಾಸಿಗಳು ಅಳಲನ್ನು ತೋಡಿಕೊಂಡರು. ಈ ಸಂದರ್ಭ ಜಿಲ್ಲಾ ಸಂಘಟನಾ ಸಂಚಾಲಕರು, ಮನು ತಾಲೂಕು ಸಂಚಾಲಕರು ವೀರಾಜಪೇಟೆ ತಾಲೂಕು, ಸದಸ್ಯರುಗಳಾದ ರೇಖಾ ನಾಗೇಶ್ ಮತ್ತು ಅಯ್ಯಪ್ಪ ಹಾಜರಿದ್ದರು.