ಕರಿಕೆ, ಸೆ. ೧೫: ಬಹುತೇಕ ಗುಡ್ಡಗಾಡು ಪ್ರದೇಶ ಹಾಗೂ ಪಶ್ಚಿಮಘಟ್ಟಗಳ ತಪ್ಪಲಿನ ಗ್ರಾಮದಲ್ಲಿ ಈ ಬಾರಿ ಸುರಿದ ವಿಪರೀತ ಮಳೆಗೆ ಅಡಕೆ ಬೆಳೆ ಕೊಳೆರೋಗಕ್ಕೆ ತುತ್ತಾಗಿ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರಕಾರ ಕೂಡಲೇ ವಿಶೇಷ ಪರಿಹಾರ ಒದಗಿಸಲು ಕ್ರಮ ವಹಿಸಬೇಕಿದೆ. ವಿಶೇಷವಾಗಿ ಕರಿಕೆ, ಸಂಪಾಜೆ, ಪೆರಾಜೆ, ಚೆಂಬು ಗ್ರಾಮದ ರೈತರು ಅಡಿಕೆ ಬೆಳೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದು, ಇಲ್ಲಿನ ಕೃಷಿ ವ್ಯವಸ್ಥೆ ಕೊಡಗಿನ ಕೃಷಿಗೆ ಭಿನ್ನವಾಗಿದ್ದು, ಕರಾವಳಿ ಭಾಗಕ್ಕೆ ಹೊಂದಿಕೊAಡಿರುತ್ತದೆ. ಉಳಿದಂತೆ ಜಿಲ್ಲೆಯ ಹಲವು ಕಾಫಿ ಬೆಳೆಗಾರರು ಮಿಶ್ರ ಬೆಳೆಯಾಗಿ ಅಡಿಕೆಯನ್ನು ಬೆಳೆಯುತ್ತಿದ್ದು, ಇದೀಗ ಸುರಿದ ವಿಪರೀತ ಮಳೆ ಹಾಗೂ ಹವಾಮಾನದ ವೈಪರೀತ್ಯದಿಂದಾಗಿ ಕೊಳೆರೋಗ ಬಾದಿಸಿದೆ. ಬೆಳೆಗಾರರು ತಾವು ಬೆಳೆ ನೆಲ ಕಚ್ಚಿರುವುದನ್ನು ನೋಡಿ ಕಣ್ಣೀರು ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೆರಾಜೆ, ಸಂಪಾಜೆ, ಚೆಂಬು ಭಾಗದಲ್ಲಿ ಹಳದಿ ರೋಗವೂ ಬಾಧಿಸಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದು, ಅಡಿಕೆ ಬೆಲೆ ಕೆ.ಜಿ.ಗೆ ಐನೂರರ ಗಡಿ ದಾಟಿದ ಸಂತಸದಲ್ಲಿದ್ದರೂ ಹರಸಾಹಸ ಪಟ್ಟು ಉಳಿಸಿದ ಇದೀಗ ಬೆಳೆ ಕೈಗೆ ಸಿಗದ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ಗ್ರಾಮಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನವನ್ನು ಹೋಲುವ ವಾತಾವರಣವಿದ್ದು ಮೂರು ನಾಲ್ಕು ಬಾರಿ ಬೋರ್ಡೋ ದ್ರಾವಣವನ್ನು ಸಿಂಪಡಿಸಿದರೂ ಕೊಳೆರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಇದಕ್ಕೆ ಪ್ರಾಕೃತಿಕ ವಿಕೋಪ ಪರಿಹಾರದ ಅಡಿಯಲ್ಲಿ ವಿಶೇಷ ಪರಿಹಾರ ನೀಡಬೇಕು ಎಂದು ರೈತರು `ಶಕ್ತಿ'ಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಪ್ರಾಕೃತಿಕ ವಿಕೋಪ ಪರಿಹಾರ ದಡಿಯಲ್ಲಿ ಪರಿಹಾರ ನೀಡಬೇಕಾದಲ್ಲಿ ಶೇ. ೩೩ಕ್ಕಿಂತ ಜಾಸ್ತಿ ಅಡಿಕೆ ಬೆಳೆ ಕೋಳೆ ರೋಗ ದಿಂದ ಹಾನಿಯಾಗಬೇಕೆಂಬುದು ಸರಕಾರದ ಮಾನದಂಡವಾಗಿದೆ. ಒಂದು ವೇಳೆ ಸರಕಾರ ಪರಿಹಾರ ಘೋಷಣೆ ಮಾಡಿದ್ದಲ್ಲಿ ಕೆಲವು ದಾಖಲಾತಿ ಒದಗಿಸಬೇಕಿದ್ದು, ಅಡಿಕೆ ಕೃಷಿಯಿಂದ ತಮ್ಮ ಬದುಕು ಕಟ್ಟಿಕೊಂಡಿರುವ ಬಹುಪಾಲು ರೈತರು ತಮ್ಮ ಜಮೀನಿಗೆ ಇನ್ನೂ ದಾಖಲಾತಿ ಹೊಂದದ ಕಾರಣ ಸರಕಾರದ ಮಾನದಂಡದಡಿಯಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಮತ್ತೊಂದು ಅಡಚಣೆ ಇದೆ. ಒಟ್ಟಾರೆಯಾಗಿ ಕೂಡಲೇ ಜಿಲ್ಲಾಡಳಿತ ನಷ್ಟ ಪರಿಹಾರದ ಸರ್ವೆ ನಡೆಸಿ ಅಡಿಕೆ ಬೆಳೆಗಾರರಿಗೆ ವಿಶೇಷ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಲು ಈ ಭಾಗದ ಕೃಷಿಕರು ಆಗ್ರಹಿಸಿದ್ದಾರೆ.
- ಸುಧೀರ್ ಹೊದ್ದೆಟ್ಟಿ