ಮಡಿಕೇರಿ, ಸೆ. ೧೬: ಪವಿತ್ರ ಕ್ಷೇತ್ರ ಶ್ರೀ ತಲಕಾವೇರಿಯಲ್ಲಿ ಪ್ರಸಕ್ತ ವರ್ಷ ಅಕ್ಟೋಬರ್ ೧೭ ರಂದು ರಾತ್ರಿ ೭.೨೧ಕ್ಕೆ ತೀರ್ಥೋದ್ಭವ ಜರುಗಲಿದೆ. ತಾ. ೧೭ ರಂದು ಮೇಷ ಲಗ್ನದಲ್ಲಿ ರಾತ್ರಿ ೭.೨೧ಕ್ಕೆ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವಾಗುವ ಕುರಿತು ಮುಹೂರ್ತ ನಿಗದಿಯಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಮೂಲಕ ತುಲಾ ಸಂಕ್ರಮಣ ಜಾತ್ರೆಯ ಪ್ರಯುಕ್ತ ಜರುಗುವ ಕಾರ್ಯಕ್ರಮಗಳ ಮುಹೂರ್ತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಸೆಪ್ಟೆಂಬರ್ ೨೭ರ ಮಂಗಳವಾರ ಬೆಳಿಗ್ಗೆ ೧೧.೦೫ ನಿಮಿಷಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು. ಅಕ್ಟೋಬರ್ ೫ ರ ಬುಧವಾರ ಬೆಳಿಗ್ಗೆ ೯.೩೫ ನಿಮಿಷಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ. ಅ. ೧೫ ರಂದು ಶನಿವಾರ ಬೆಳಿಗ್ಗೆ ೧೧.೪೫ ನಿಮಿಷಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು ಮತ್ತು ಸಂಜೆ ೪.೧೫ ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇಡುವುದು ಎಂದು ಸಮಯ ನಿಗದಿಯಾಗಿದೆ.