ಮಡಿಕೇರಿ, ಸೆ.೧೬: ಸರಕಾರ ಎಸಿಬಿಯ ಅಧಿಕಾರವನ್ನು ಹಿಂಪಡೆದು ಮತ್ತೆ ಲೋಕಾಯುಕ್ತಕ್ಕೆ ಅಧಿಕಾರ ನೀಡಿದ ಬಳಿಕ ನಡೆದ ಪ್ರಥಮ ಧಾಳಿಯಲ್ಲಿ ಜಿಲ್ಲೆಯ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ ಕಚೇರಿಯ ಸಹಕಾರಿ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. ಜನತೆಗೆ ಸಹಕಾರಿಯಾಗಬೇಕಿರುವ ಕಚೇರಿಯಲ್ಲಿ ಸಹಕಾರ ಸಂಘಗಳ ನೋಂದಣಿ ಮಾಡಿಕೊಡುವ ಸಿಬ್ಬಂದಿಯಾಗಿರುವ ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ.
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ, ಹೊರ ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಿರುವ ಕಕ್ಕಬ್ಬೆಯ ದೇವಯ್ಯ ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಧಾಳಿ ಮಾಡಿ ಮಂಜುನಾಥನನ್ನು ವಶಕ್ಕೆ ಪಡೆದಿದ್ದಾರೆ. ಸಂಘದ ನೋಂದಾವಣೆಗಾಗಿ ದೇವಯ್ಯ ತಾ. ೧೪ ರಂದು ಮಂಜುನಾಥ್ ಅವರನ್ನು ಸಂಪರ್ಕ ಮಾಡಿದ್ದರು. ಸರಕಾರಿ ಶುಲ್ಕ ರೂ. ಒಂದು ಸಾವಿರವಾಗಿದ್ದರೂ ಕೂಡ ಮಂಜುನಾಥ್ ರೂ.೧೫ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಚರ್ಚೆಯಾಗಿ ಕೊನೆಗೆ ಮಂಜುನಾಥ್ ರೂ.೧೦ಸಾವಿರಕ್ಕೆ ಒಪ್ಪಿಗೆ ಸೂಚಿಸಿದ್ದರು. ಇದರಿಂದ ಬೇಸತ್ತ ದೇವಯ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನದಂತೆ ಇಂದು ಮುಂಗಡವಾಗಿ ರೂ.೮ ಸಾವಿರ ಲಂಚ ನೀಡಲು
(ಮೊದಲ ಪುಟದಿಂದ) ದೇವಯ್ಯ ತಯಾರಿ ಮಾಡಿಕೊಂಡಿದ್ದರು. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ದಾಳಿ ಮಾಡಿದ ಅಧಿಕಾರಿಗಳು ಹಣ ಸಹಿತ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡರು. ಕಚೇರಿಯಲ್ಲಿ ರಾತ್ರಿವರೆಗೂ ವಿಚಾರಣೆ ನಡೆಸಿದ ಅಧಿಕಾರಿಗಳು ನಂತರ ಆರೋಪಿ ಮಂಜುನಾಥನನ್ನು ನ್ಯಾಯಾಧೀಶರ ವಶಕ್ಕೆ ಒಪ್ಪಿಸಿದರು. ಇದರೊಂದಿಗೆ ಮಂಜುನಾಥ್ ಬಳಿ ಇದ್ದ ಅನಧಿಕೃತ ರೂ. ೨೨,೫೪೦ ಹಣವನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.
ಕಚೇರಿಗೆ ಇತರ ಕೆಲಸ ಕಾರ್ಯಗಳಿಗೆ ಆಗಮಿಸಿದ್ದ ಕೆಲವರು ಮಂಜುನಾಥ್ ಪ್ರತಿ ಕೆಲಸಕ್ಕೂ ಲಂಚ ಪಡೆಯುತ್ತಿರುವದಾಗಿ ಹೇಳಿದರಲ್ಲದೆ, ನಾಲ್ಕು ದಿನಗಳ ಹಿಂದೆಯಷ್ಟೇ ಹಿರಿಯ ಅಧಿಕಾರಿಯೋರ್ವರು ಇವರ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಎಚ್ಚರಿಕೆ ಕೂಡ ನೀಡಿದ್ದರೆನ್ನಲಾಗಿದ್ದು, ಅಷ್ಟರಲ್ಲೇ ಲೋಕಾಯುಕ್ತ ಬಲೆಗೆ ಸಿಲುಕಿಯಾಗಿದೆ. ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಲೋಕಾಯುಕ್ತ ಎಸ್.ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಪವನ್ಕುಮಾರ್, ನಿರೀಕ್ಷಕ ಲೋಕೇಶ್, ಮುಖ್ಯ ಪೇದೆಗಳಾದ ಲೋಕೇಶ್, ಮಂಜುನಾಥ್, ಸಿಬ್ಬಂದಿಗಳಾದ ಪೃಥ್ವೀಶ್, ಸಲಾವುದ್ದೀನ್, ಅರುಣ್ಕುಮಾರ್, ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.