ಮಡಿಕೇರಿ, ಸೆ. ೧೫: ಹೊದ್ದೂರು ಕಬಡಕೇರಿ ಯುವಕ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವ ಒಕ್ಕೂಟ ಮಡಿಕೇರಿ ಇದರ ಆಶ್ರಯದಲ್ಲಿ ಕಬಡಕೇರಿಯಲ್ಲಿ ೪೭ನೇ ವರ್ಷದ ಕೈಲು ಮುಹೂರ್ತ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ೧೦ ಗಂಟೆಗೆ ಅಮ್ಮಣಂಡ ತಮ್ಮುಣಿ ಸುಬ್ಬಯ್ಯ ಅವರು ತೆಂಗಿನ ಕಾಯಿಗೆ ಗುಂಡು ಹೊಡೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ಭಾರದ ಕಲ್ಲು ಎಸೆತ, ವಿಷದ ಚೆಂಡಿನ ಎಸೆತ, ವಯಸ್ಕರ ಓಟ, ಮೆರಾಥನ್ ಓಟ, ವಿವಿಧ ವಿಭಾಗದ ಓಟ, ಸಾಂಸ್ಕೃತಿಕ ವಾದ್ಯ ಕುಣಿತ ಸ್ಪರ್ಧೆಗಳು ನಡೆದವು.
ನಂತರ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚೆಟ್ಟಿಮಾಡ ಬಾಲಕೃಷ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಶಾಸ್ತ-ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಮಾತನಾಡಿ, ಎಲ್ಲಾ ಜಾತಿ ಜನಾಂಗದವರು ಒಂದಾಗಿ ಕ್ರೀಡಾಕೂಟ ನಡೆಸುತ್ತಿರುವುದು ಸಂತೋಷಕರ. ಎಲ್ಲರೂ ಒಂದಾಗಿ ಬೆರೆತಾಗ ಮಾತ್ರ ಸಮಾಜದಲ್ಲಿ ಶಾಂತಿ, ಸಮಾಧಾನ ನೆಲೆಸಲು ಸಾಧ್ಯ. ಕ್ರೀಡಾಕೂಟದಲ್ಲಿ ಹಬ್ಬದ ಆಚರಣೆಯ ಸಂಪ್ರದಾಯ, ಪದ್ಧತಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಉಳಿಸಿ-ಬೆಳೆಸುವ ಕಾರ್ಯ ಯುವ ಪೀಳಿಗೆಯಿಂದ ನಡೆಯಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಬೆಳೆಗಾರ ಚೌರೀರ ಸುನಿ ಅಚ್ಚಯ್ಯ, ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ, ಸದಸ್ಯರಾದ ಕೆ. ಮೊಣ್ಣಪ್ಪ, ಎಂ.ಬಿ. ಹಮೀದ್ ಭಾಗವಹಿಸಿ ಮಾತನಾಡಿದರು.
ವಿವಿಧ ಸರಕಾರಿ ಇಲಾಖೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ನ್ಯಾಷನಲ್ ಇನ್ಯೂರೆನ್ಸ್ ಕಂಪೆನಿ ಲಿಮಿಟೆಡ್ ಉದ್ಯೋಗಿ ಮಂಡೇಪAಡ ಕೆ. ರಮೇಶ್, ಪೊಲೀಸ್ ಸಹಾಯಕ ಉಪನಿರೀಕ್ಷಕ ಕೂಡಂಡ ಎಸ್. ವಸಂತ, ಜಾನ್ಸನ್ ಇಂಡಿಯಾ ಲಿಮಿಟೆಡ್‌ನ ಉದ್ಯೋಗಿ ಮೇಕಂಡ ರಾಜ ಬೆಳ್ಯಪ್ಪ, ಮಾಜಿ ಸೈನಿಕ ವಕ್ಕಲಿಗರ ಎ. ವಾಸುದೇವ, ನಿವೃತ್ತ ಮುಖ್ಯ ಶಿಕ್ಷಕರಾದ ಚೆಟ್ಟಿಮಾಡ ಆರ್. ಗೋಪಾಲ, ಚೆಟ್ಟಿಮಾಡ ಶಾರದ ಚಂದ್ರಶೇಖರ್, ಅಂತರರಾಷ್ಟಿçÃಯ ಮಟ್ಟದ ವಿಶೇಷಚೇತನ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಕ್ಕಲಿಗರ ಎಂ. ಲೋಹಿತ್ ಗೌಡ ಇವರುಗಳನ್ನು ಸಂಘದ ವತಿಯಿಂದ ಶಾಲು ಹೊದಿಸಿ, ಫಲ-ತಾಂಬೂಲ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.
ಮೇಕಂಡ ಚರಿಷ್ಮಾ ಕಾವೇರಪ್ಪ ಪ್ರಾರ್ಥಿಸಿದರೆ, ಸಂಘಧ ಕಾರ್ಯದರ್ಶಿ ಮೇಕಂಡ ದೊರೆ ತಮ್ಮಯ್ಯ ಸ್ವಾಗತಿಸಿ, ಕೂಡಂಡ ಸಾಬ ಸುಬ್ರಮಣಿ ನಿರೂಪಿಸಿ, ಸಂಘದ ಸದಸ್ಯ ಚೆಟ್ಟಿಮಾಡ ಲೋಕೇಶ್ ವಂದಿಸಿದರು.