ಗೋಣಿಕೊಪ್ಪಲು, ಸೆ.೧೩: ಕೊಡಗು ಮತ್ತು ಮಲೆನಾಡು ಪ್ರದೇಶದಲ್ಲಿ ರೈತರು ವರ್ಷದಲ್ಲಿ ಕೇವಲ ೩ ತಿಂಗಳು ಮಾತ್ರ ಉಪಯೋಗಿಸುವ ೧೦ ಹೆಚ್.ಪಿ.ವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕೆಂದು ಕರ್ನಾಟಕ ರೈತ ಸಂಘ ಹಿರಿಯ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಮೈಸೂರಿನ ಸೆಸ್ಕ್ನ ಮೈಸೂರು ವಿಭಾಗದ ನಿರ್ದೇಶಕ ಜಯವಿಭವ ಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಸೆಸ್ಕ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ಜಿಲ್ಲೆಯ ರೈತ ಸಂಘದ ಪದಾಧಿಕಾರಿಗಳು ೧೦ ಹೆಚ್.ಪಿ.ವರೆಗಿನ ಉಚಿತ ವಿದ್ಯುತ್ ನೀಡುವಲ್ಲಿ ಇಲಾಖೆಯು ನೀಡುತ್ತಿರುವ ಅಸ್ಪಷ್ಟ ಮಾಹಿತಿಯ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಅಲ್ಲದೆ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡುವಂತೆ ಮನುಸೋಮಯ್ಯ ಅಧಿಕಾರಿಗಳ ಗಮನ ಸೆಳೆದರು. ತಪ್ಪಿದಲ್ಲಿ ಅನಿವಾರ್ಯವಾಗಿ ರೈತ ಸಂಘವು ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹಾಗೂ ಅಗತ್ಯವಿದ್ದಲ್ಲಿ ರೈತರಿಂದ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೆ ಕಾಫಿ ಬೆಳೆಗಾರರು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಗಮನ ಸೆಳೆದರು.
ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯು ಒಂದು ಪ್ರಮುಖ ಉದ್ಯಮವಾಗಿದ್ದು ರಾಜ್ಯ ಹಾಗೂ ಕೇಂದ್ರ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ಆರ್ಥಿಕ ನೆರವು ವಾರ್ಷಿಕವಾಗಿ ನೀಡುತ್ತಿದೆ. ಕಾಫಿ ಬೆಳೆಯುವ ರೈತರಿಗೆ ಉತ್ತೇಜನ ನೀಡಬೇಕಾದದ್ದು ಸರಕಾರ ಹಾಗೂ ನಿಗಮದ ಕರ್ತವ್ಯ ಆಗಿದೆ. ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ರಾಜ್ಯದ ವಿವಿಧ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಗಮನ ಸೆಳೆಯಲಾಗಿದೆ. ಅಲ್ಲದೆ ಹಲವಾರು ಹೋರಾಟಗಳು ನಡೆದಿವೆ. ಕಳೆದ ಮಾರ್ಚ್ ತಿಂಗಳಿನಲ್ಲಿ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿದ್ದ ವೇಳೆ ಕೊಡಗು ಜಿಲ್ಲೆಯ ರೈತರಿಗೆ ೧೦ಹೆಚ್.ಪಿ ವರೆಗಿನ ರೈತರಿಗೆ ಉಚಿತ ವಿದ್ಯುತ್ ಪೂರೈಸಲು ಸರಕಾರ ಒಪ್ಪಿಗೆ ನೀಡಿತ್ತು.
ನಂತರದ ದಿನಗಳಲ್ಲಿ ರೈತರಿಗೆ ಕೆಲವು ಷರತ್ತುಗಳನ್ನು ವಿಧಿಸಿ ರೈತರು ಮೊದಲು ವಿದ್ಯುತ್ ಮೀಟರ್ ಶುಲ್ಕವನ್ನು ಕಟ್ಟುವಂತೆ ನಂತರ ರೈತರ ಖಾತೆಗೆ ಡಿ.ಬಿ.ಟಿ ಮೂಲಕ ಸರಕಾರ ನೇರವಾಗಿ ಸಬ್ಸಿಡಿ ಹಣದ ರೀತಿಯಲ್ಲಿ ಮರುಪಾವತಿ ಮಾಡಲಾಗುತ್ತದೆ ಎಂದು ಆದೇಶ ಹೊರಡಿಸಿತು. ಈ ಆದೇಶವನ್ನು ರೈತ ಸಂಘ ಹಾಗೂ ಕಾಫಿ ಬೆಳೆಯುವ ಇತರ ಜಿಲ್ಲೆಗಳ ಬೆಳೆಗಾರರು ತೀವ್ರವಾಗಿ ವಿರೋಧಿಸಿದೆ.
ಸಹಕಾರಿ ಬ್ಯಾಂಕ್ಗಳ ಮೂಲಕ ರೈತರಿಗೆ ಬಡ್ಡಿ ರಹಿತ ೩ ಲಕ್ಷದ ವರೆಗೆ ಸಾಲ ನೀಡುತ್ತಿದ್ದು ಇತರ ಬಡ್ಡಿಯನ್ನು ನೇರವಾಗಿ ಸಹಕಾರಿ ಬ್ಯಾಂಕ್ಗಳಿಗೆ ಸರಕಾರ ಭರ್ತಿ ಮಾಡುತ್ತಿರುವ ರೀತಿಯಲ್ಲಿ ರೈತರಿಗೆ ಕೊಡುವ ವಿನಾಯಿತಿ ದÀರವನ್ನು ಚೆಸ್ಕಾಂ ಕಂಪನಿಗೆ ಬರಿಸಬೇಕೆಂಬುದಾಗಿ ಮನು ಸೋಮಯ್ಯ ಒತ್ತಾಯಿಸಿದರು.
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ವಿದ್ಯುತ್ ವಿತರಣ ತಂತಿಯು ಅವೈಜ್ಞಾನಿಕವಾಗಿ ರೈತರ ತೋಟದಲ್ಲಿ ಹಾದು ಹೋಗುತ್ತಿದ್ದು ವಿದ್ಯುತ್ ತಂತಿಗಳು ತೀರಾ ಹಳೆಯದಾಗಿದೆ. ಇದರಿಂದ ತೋಟದ ನಿರ್ವಹಣ ಸಂದರ್ಭ ರೈತರು, ಕಾರ್ಮಿಕರು ಉಪಯೋಗಿಸುವ ಏಣಿಗಳು ವಿದ್ಯುತ್ ತಂತಿ ತಗಲಿ ಪ್ರಾಣಹಾನಿ ಸಂಭವಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕು.
ಜಿಲ್ಲೆಯ ಬಾಳೆಲೆ ಹಾಗೂ ಹುದಿಕೇರಿ ಹೋಬಳಿಯಲ್ಲಿ ನೂತನÀ ವಿದ್ಯುತ್ ವಿತರಣ ಘಟಕ ಪ್ರಾರಂಭ ಮಾಡುವುದಾಗಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಈ ಬಗ್ಗೆ ಶೀಘ್ರವೆ ಕ್ರಮಕ್ಕೆ ಮುಂದಾಗಬೇಕು. ಶ್ರೀಮಂಗಲ ಹೋಬಳಿಯ ವಿದ್ಯುತ್ ವಿತರಣ ಘಟಕವು ಮೇಲ್ದರ್ಜೆಗೆ ಏರಿಸುವ ಕಾರ್ಯಕ್ಕೆ ವೇಗ ನೀಡಬೇಕು. ಕೊಡಗು ಜಿಲ್ಲೆಯಲ್ಲಿ ಸರಿ ಸುಮಾರು ವಾರ್ಷಿಕ ೬ ತಿಂಗಳವರೆಗೆ ಮಳೆಗಾಲವಾಗಿದ್ದು ಈ ಸಮಯದಲ್ಲಿ ತಿಂಗಳಿನ ೧೫ ದಿನಗಳು ಮಾತ್ರ ಗುಣಮಟ್ಟದ ವಿದ್ಯುತ್ ಪೂರೈಕೆ ಆಗುತ್ತಿವೆ. ಉಳಿದ ಅವಧಿಯಲ್ಲಿ ಗುಣಮಟ್ಟದ ವಿದ್ಯುತ್ ರೈತರಿಗೆ ದೊರಕುತ್ತಿಲ್ಲ. ಆದರೆ ಪ್ರತಿ ತಿಂಗಳು ವಿದ್ಯುತ್ ಶುಲ್ಕ ತೆರಿಗೆ, ಕನಿಷ್ಟ ಶುಲ್ಕವನ್ನು ಭರಿಸಬೇಕಾದ ಅನಿವಾರ್ಯತೆ ಇದೆ ಈ ಬಗ್ಗೆ ಈ ನೀತಿಯನ್ನು ಪರಾಮರ್ಷಿಸಬೇಕು ಹಾಗೂ ವಿವಿಧ ಇತರ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು.
ಅಧಿಕಾರಿಯ ಭೇಟಿಯ ವೇಳೆ ಮೈಸೂರು ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಹಿಳಾ ಮುಖಂಡರಾದ ಮಿದೇರಿರ ಕವಿತರಾಮ್, ಮಂಡೇಪAಡ ಪ್ರವೀಣ್, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ನಲ್ಲೂರು ಅಧ್ಯಕ್ಷ ತೀತರಮಾಡ ರಾಜ, ಬಿರುನಾಣಿ ಅಧ್ಯಕ್ಷ ಕರ್ತಮಾಡ ಸುಜು ಕರುಂಬಯ್ಯ, ಬಾಳಲೆಯ ತಾಣಚ್ಚೀರ ಲೆಹರ್ ಬಿದ್ದಪ್ಪ, ವಿ.ಎಲ್. ಗಣೇಶ್, ಪೆಮ್ಮಂಡ ಉಮೇಶ್, ಚೆಪ್ಪುಡೀರ ಬೋಪಣ್ಣ, ಸೋಮವಾರಪೇಟೆಯ ತಾಲೂಕು ಅಧ್ಯಕ್ಷ ದಿನೇಶ್, ಸಂಚಾಲಕ ಹೂವಯ್ಯ, ಕಾರ್ಯದರ್ಶಿ ಲಕ್ಷö್ಮಣ್ ಸೇರಿದಂತೆ ಇನ್ನಿತರ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.