*ಸಿದ್ದಾಪುರ, ಸೆ. ೧೩: ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿ ಪಥದತ್ತ ಸಾಗುತ್ತಿದೆ. ಸುಮಾರು ರೂ. ೬೮ ಲಕ್ಷ ಲಾಭಗಳಿಸಿದ್ದು, ರೂ. ೨ ಕೋಟಿ ವೆಚ್ಚದಲ್ಲಿ ನೂತನ ಕಚೇರಿ ಸಂಕೀರ್ಣವನ್ನು ನಿರ್ಮಿಸುತ್ತಿದೆ.

ವಾಲ್ನೂರು-ತ್ಯಾಗತ್ತೂರು, ನಂಜರಾಯಪಟ್ಟಣ, ರಂಗಸಮುದ್ರ, ರಸಲ್‌ಪುರ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಅತ್ತೂರು, ಗುಡ್ಡೆಹೊಸೂರು ವ್ಯಾಪ್ತಿಯ ೨೨೬೦ ಸದಸ್ಯರಿರುವ ಸಂಘ ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘದ ಕಚೇರಿ ಸಹಿತ ಬೃಹತ್ ಸಂಕೀರ್ಣ ನಿರ್ಮಾಣಗೊಳ್ಳುತ್ತಿದೆ. ಕಚೇರಿ ಕಟ್ಟಡದ ಮುಂಭಾಗದಲ್ಲೇ ಸುಮಾರು ರೂ. ೫೦ ಲಕ್ಷ ವೆಚ್ಚದ ವಾಣಿಜ್ಯ ಕಟ್ಟಡ ನಿರ್ಮಾಣ ಹಂತದಲ್ಲಿದೆ.

ಈ ಕಟ್ಟಡದಲ್ಲಿ ಸೂಪರ್ ಮಾರ್ಕೆಟ್, ಕುಶಾಲನಗರ ಹೋಬಳಿ ಕೇಂದ್ರದ ಕಚೇರಿ ಸೇರಿದಂತೆ ಮಳಿಗೆಗಳು ಕಾರ್ಯ ನಿರ್ವಹಿಸಲಿವೆ.

ಗೊಬ್ಬರ ಮತ್ತು ಎಲ್ಲಾ ಕೃಷಿ ಪರಿಕರಗಳು ಇಲ್ಲೇ ಮಾರಾಟ ಗೊಳ್ಳುತ್ತಿದ್ದು, ರೈತಾಪಿ ವರ್ಗಕ್ಕೆ ಹೆಚ್ಚು ಸಹಕಾರಿಯಾಗಿದೆ. ಕೃಷಿ ಕಾರ್ಯ ಮತ್ತು ಗೊಬ್ಬರ ಸಾಗಾಟಕ್ಕೆ ಅಗತ್ಯವಿರುವ ವಾಹನಗಳು ಕೂಡ ಸಂಘದಲ್ಲಿದ್ದು, ಸದಸ್ಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಸಂಘದ ಅಧ್ಯಕ್ಷ ಬಿ.ಸಿ. ಮುರುಳಿ ಮಾದಯ್ಯ ಅವರ ನೇತೃತ್ವದ ಆಡಳಿತ ಮಂಡಳಿಯ ಪರಿಶ್ರಮದಿಂದ ಸಂಘ ಅಭಿವೃದ್ಧಿ ಸಾಧಿಸುತ್ತಿದೆ ಎಂದು ಸದಸ್ಯರು ತೃಪ್ತಿ ವ್ಯಕ್ತಪಡಿಸಿದ್ದಾರೆ.

ಪಕ್ಕದಲ್ಲೇ ಪ್ರವಾಸಿಗರ ಆಕರ್ಷಣೀಯ ತಾಣ ದುಬಾರೆ ಮತ್ತು ಭಕ್ತರನ್ನು ಸೆಳೆಯುತ್ತಿರುವ ಇತಿಹಾಸ ಪ್ರಸಿದ್ಧ ನಂಜುAಡೇಶ್ವರ ದೇವಾಲಯವಿದ್ದು, ನೂತನ ವಾಣಿಜ್ಯ ಮಳಿಗೆಗಳ ಮೂಲಕ ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆ ಆಡಳಿತ ಮಂಡಳಿಗಿದೆ. ತಾ. ೧೮ ರಂದು ಸಂಘದ ಮಹಾಸಭೆ ಜರುಗಲಿದೆ.