ಮಡಿಕೇರಿ, ಸೆ. ೧೨: ಸಿನಿಮಾ ರಂಗದಲ್ಲಿ ಪ್ರಸ್ತುತ ಭಾರೀ ಪ್ರಚಲಿತದಲ್ಲಿರುವ ನಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೆಲವೇ ವರ್ಷಗಳ ಅವಧಿಯಲ್ಲಿ ರಶ್ಮಿಕಾ ಯಶಸ್ಸಿನ ಹಾದಿ ಅಚ್ಚರಿಯದು. ಕೊಡಗಿನ ವೀರಾಜಪೇಟೆಯಿಂದ ಈಕೆ ಇದೀಗ ಬಾಲಿವುಡ್‌ನ ಮಟ್ಟಕ್ಕೂ ಬೆಳೆದಿದ್ದು, ಚಿತ್ರರಂಗದಲ್ಲಿ ಬಹುಬೇಡಿಕೆಯ ತಾರೆಯಾಗಿದ್ದಾರೆ. ಕನ್ನಡ ಸಿನಿಮಾ ಕಿರಿಕ್‌ಪಾರ್ಟಿಯ ಮೂಲಕ ಅನಿರೀಕ್ಷಿತವೆಂಬAತೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಈ ಮೋಹಕ ಯುವನಟಿ ನಂತರದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಭಾರೀ ಸದ್ದು ಮಾಡಿದ ರಶ್ಮಿಕಾರನ್ನು ಸಾಲು ಸಾಲು ಚಿತ್ರಗಳು ಅರಸಿ ಬಂದವು.

ಕಿರಿಕ್‌ಪಾರ್ಟಿ ಯಶಸ್ಸಿನ ಬಳಿಕ ಕನ್ನಡದಲ್ಲಿ ಖ್ಯಾತನಟರುಗಳಾದ ದರ್ಶನ್, ಪುನೀತ್ ರಾಜ್‌ಕುಮಾರ್, ಗಣೇಶ್ ಸೇರಿದಂತೆ ಹಲವು ನಾಯಕನಟರೊಂದಿಗೆ ಕೆಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಇದರ ಬೆನ್ನಲ್ಲೇ ತಮಿಳು ಹಾಗೂ ತೆಲುಗುಚಿತ್ರರಂಗದಿAದಲೂ ರಶ್ಮಿಕಾಗೆ ಬೇಡಿಕೆ ಬಂದಿದ್ದು, ತಮಿಳು ಹಾಗೂ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಮನೆಮಾತಾಗಿದ್ದಾರೆ.

ಭಾರೀ ಸಂಖ್ಯೆಯ ಅಭಿಮಾನಿಗಳನ್ನು ಈಕೆ ಹೊಂದಿದ್ದಾರೆ. ಇತ್ತೀಚಿನ ತೆಲುಗು ಚಿತ್ರ ಪುಷ್ಪ ಸೂಪರ್ ಹಿಟ್ ಆಗಿದ್ದು, ಇವರ ಅದ್ಭುತ ನಟನೆಯಿಂದಾಗಿ ಮತ್ತಷ್ಟು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಹಲವು ಭಾಷೆಗಳಲ್ಲಿ ತೆರೆಕಂಡ ಸೀತಾರಾಮ ಕೂಡ ಭಾರೀ ಯಶಸ್ಸು ಕಂಡಿದೆ.

ಇದೀಗ ಬಾಲಿವುಡ್‌ನಲ್ಲಿ...

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷಾ ಚಿತ್ರಗಳ ಬಳಿಕ ರಶ್ಮಿಕಾ ಇದೀಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್‌ನ ಹಿರಿಯ ನಟ ಹಿಂದಿ ಚಿತ್ರರಂಗದ ದಿಗ್ಗಜ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರವೊಂದರಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾಗೆ ಒಲಿದು ಬಂದಿದ್ದು, ಈ ಚಿತ್ರ ಈಗಾಗಲೇ ತೆರೆಗೆಬರಲು ಸಿದ್ಧವಾಗಿದೆ. ‘ಗುಡ್‌ಬೈ’ ಹಿಂದಿ ಚಿತ್ರದಲ್ಲಿ ರಶ್ಮಿಕಾ ಹಾಗೂ ಅಮಿತಾಬ್ ತಂದೆ - ಮಗಳ ಪಾತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ತಕ್ಷಣದಲ್ಲೇ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಅಕ್ಟೋಬರ್ ೭ ರಂದು ‘ಗುಡ್‌ಬೈ’ ತೆರೆಗೆ ಬರಲಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ನಿರ್ದೇಶಕ ವಿಕಾಸ್ ಬಹ್ಲ್ ಅವರಾಗಿದ್ದು, ಅಮಿತಾಬ್ ಬಚ್ಚನ್, ನೀನಾಗುಪ್ತ ಸೇರಿದಂತೆ ಹಲವು ಖ್ಯಾತ ನಟ - ನಟಿಯರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗುಡ್‌ಬೈ ತೆರೆ ಕಾಣಲು ಸಜ್ಜಾಗಿದ್ದರೆ, ಇನ್ನೂ ಎರಡು - ಮೂರು ಚಿತ್ರಗಳಲ್ಲಿ ರಶ್ಮಿಕಾಗೆ ಆಫರ್ ಬಂದಿದ್ದು, ಇದರ ಚಿತ್ರೀಕರಣವೂ ನಡೆಯುತ್ತಿದೆ. ದಕ್ಷಿಣ ಭಾರತದಲ್ಲಿ ಮನೆ ಮಾತಾಗಿದ್ದ ರಶ್ಮಿಕಾರ ಬಾಲಿವುಡ್ ಎಂಟ್ರಿ ಬಗ್ಗೆ ಇದೀಗ ಎಲ್ಲರ ಚಿತ್ತನೆಟ್ಟಿದೆ.

ಈಕೆಯ ಯಶಸ್ಸಿನ ಹಾದಿಯ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ತಂದೆ ವೀರಾಜಪೇಟೆಯ ಉದ್ಯಮಿ ಮುಂಡಚಾಡಿರ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಮಂದಣ್ಣ, ಪುತ್ರಿಯಲ್ಲಿ ಪ್ರತಿಭೆಯಿದೆ. ಅವಕಾಶಗಳು ಬರುತ್ತಿದೆ. ಇದಕ್ಕೆ ಪ್ರೋತ್ಸಾಹ ನೀಡುವದು ಪೋಷಕರಾಗಿ ತಮ್ಮ ಕರ್ತವ್ಯವಾಗಿದೆ. ಅಭಿಮಾನಿಗಳ ಹಾರೈಕೆ ಬಯಸುವುದಾಗಿ ಹೇಳಿದ್ದಾರೆ.

-ಶಶಿ ಸೋಮಯ್ಯ