ಕಣಿವೆ, ಸೆ. ೧೨ : ಈ ಬಾರಿಯೂ ಶುಂಠಿಯ ಫಸಲಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಇಲ್ಲವಾಗಿದೆ.
ಕಳೆದ ಎರಡು ವರ್ಷ ಗಳಿಂದಲೂ ಶುಂಠಿಯ ಫಸಲಿನ ಬೆಲೆ ಕುಸಿತದಿಂದಾಗಿ ಕಂಗಾಲಾಗಿ ಹೋಗಿದ್ದ ಬೆಳೆಗಾರನಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
೨೦೧೭ - ೧೮ ರಲ್ಲಿ ೬೦ ಕೆಜಿ ತೂಕದ ಚೀಲವೊಂದರ ಶುಂಠಿ ಫಸಲಿಗೆ ೫೨೦೦ ರೂ ಇದ್ದ ಶುಂಠಿ ದರ ಈ ವರ್ಷ ಕೇವಲ ೬೫೦ ರಿಂದ ೭೦೦ ರೂ ಇದೆ. ಕಳೆದ ವರ್ಷವೂ ೭೫೦ ರಿಂದ ೧೦೦೦ ರೂ ಇತ್ತು. ೨೦೨೦ ರಲ್ಲಿ ಒಂದು ಚೀಲ ಶುಂಠಿಗೆ ೧೦೦೦ - ೧೧೦೦ ರೂ ಇತ್ತು. ಆದರೆ ಈ ಬಾರಿ ಕೃಷಿಕರು ಬೆಳೆದ ಶುಂಠಿ ಫಸಲಿಗೆ ಕೇವಲ ೬೦೦ ರಿಂದ ೭೦೦ ರೂ ಇರುವುದು ಬೆಳೆಗಾರರನ್ನು ಚಿಂತೆ ಗೀಡು ಮಾಡಿದೆ.
ಖರ್ಚು ದುಬಾರಿ
ಶುಂಠಿಗೆ ಅತ್ಯಂತ ಗರಿಷ್ಠ ದರ ೫೦೦೦ ರೂ ಇದ್ದಾಗ ಇದ್ದಂತಹ ಖರ್ಚು ಈಗ ೬೦೦ ರೂ ಇದ್ದಾಗಲೂ ಇದೆ. ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲು ೬ ರಿಂದ ೮ ತಿಂಗಳ ಅವಧಿಗೆ ೩.೫೦ ಲಕ್ಷ ರೂಗಳಿಂದ ೪.೦೦ ಲಕ್ಷ ರೂ ಖರ್ಚು ತಗಲುತ್ತಿದೆ. ಒಂದು ಎಕರೆ ಭೂಮಿಯಲ್ಲಿ ಏನೆಲ್ಲಾ ಕಸರತ್ತು ಮಾಡಿ ಶುಂಠಿ ಬೆಳೆದರೂ ಕೂಡ ಕನಿಷ್ಟ ೪೦೦ ರಿಂದ ಗರಿಷ್ಠ ೫೦೦ ಚೀಲ ಇಳುವರಿ ಬರುತ್ತದೆ. ಈಗ ಮಾರುಕಟ್ಟೆಯಲ್ಲಿ ಇರುವ ದರಕ್ಕೆ ಹೋಲಿಸಿದಲ್ಲಿ ೫೦೦ ಚೀಲ ಇಳುವರಿ ಅಂದರೂನು ಕೇವಲ ೩ ಲಕ್ಷ ಆಗುತ್ತದೆ. ಕೈಯಿಂದ ಅರ್ಧ ದಿಂದ ಒಂದು ಲಕ್ಷದ ವರೆಗೆ ನಷ್ಟವಾಗುತ್ತದೆ.
ಭೂಮಾಲಿಕರಿಗೆ ಲಾಭ
ಮೊದ ಮೊದಲು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಈ ಶುಂಠಿ ಇತ್ತೀಚೆಗೆ ಮಾಯಾ ಬೆಳೆ ಎಂದೇ ಜನ ಜನಿತವಾಗಿದೆ. ಅಂದರೆ ಬೆಳೆದವನ ಅದೃಷ್ಟವನ್ನು ಪರೀಕ್ಷಿಸುವ ಈ ಬೆಳೆ ಉತ್ತಮವಾಗಿ ಬಂದರೆ ಬೆಳೆಗಾರನಿಗೆ ಸಂತಸವನ್ನು ತರುತ್ತದೆ. ಒಂದು ವೇಳೆ ರೋಗ ರುಜಿನಗಳಿಂದ ಬೆಳೆ ಕೈಕೊಟ್ಟರೆ ಬೆಳೆಗಾರನಿಗೆ ಸಂಪೂರ್ಣ ಸಂಕಷ್ಟವನ್ನು ತಂದಿಡುತ್ತದೆ. ಅಂದರೆ ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲು ಭೂಮಾಲೀಕನಿಗೆ ೧೧ ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡು ೫೦ ಸಾವಿರ ಕೊಡಬೇಕಾಗುತ್ತದೆ.
ಹಾಗೆಯೇ ಆ ಭೂಮಿಯ ಸುತ್ತಾ ಬೇಲಿ ನಿರ್ಮಾಣ, ಉಳುಮೆ ಮಾಡಿ ಮಣ್ಣನ್ನು ಹದಗೊಳಿಸುವುದು, ದನಗಳ ಗೊಬ್ಬರ ಹರಡಿ ಶುಂಠಿ ಬಿತ್ತನೆಗೆ ಹದಗೊಳಿಸುವುದು, ಕೋಳಿ ಗೊಬ್ಬರ, ರಸ ಗೊಬ್ಬರ, ಬೇವಿನ ಹಿಂಡಿ ಎಲ್ಲಾ ಖರ್ಚು ಸೇರಿ ಬಿತ್ತನೆಯ ದಿನಕ್ಕೆ ಶುಂಠಿಯ ಬೇಸಾಯಕ್ಕೆ ಶೇ.೭೦ ಭಾಗ ಹಣ ಖಾಲಿಯಾಗುತ್ತದೆ. ಉಳಿದ ಶೇ.೩೦ ಭಾಗದ ಹಣದಲ್ಲಿ ಶುಂಠಿಯ ಕಳೆ ತೆಗೆಯುವುದು, ಮಣ್ಣು ಕಟ್ಟುವುದು, ಒಳಗೆ ಮಣ್ಣು ಹಾಕುವುದು, ರಾಸಾಯನಿಕ ಸಿಂಪಡಿಕೆಗೆ ಖರ್ಚಾಗುತ್ತದೆ. ಶುಂಠಿ ಬೇಸಾಯಕ್ಕೆ ಬರುವ ಮಹಿಳಾ ಕಾರ್ಮಿಕರಿಗೆ ದಿನವೊಂದಕ್ಕೆ ೩೦೦ ರಿಂದ ೩೫೦ ರೂ ಕೂಲಿ ಇದ್ದರೆ, ಗಂಡಾಳು ಕೂಲಿ ೫೫೦ ರಿಂದ ೬೦೦ ರೂ ಇದೆ. ಒಟ್ಟಾರೆ ಎಲ್ಲಾ ಖರ್ಚು ವೆಚ್ಚಗಳು ಸೇರಿ ಬಿತ್ತನೆಯಿಂದ ಕಟಾವಿನತನಕ ಶುಂಠಿ ಬೇಸಾಯಕ್ಕೆ ೩.೫೦ ಯಿಂದ ೪ ಲಕ್ಷ ಹಣ ವ್ಯಯವಾಗುತ್ತದೆ.
ಉತ್ತಮ ಮಳೆ - ಬೆಲೆ ಇಲ್ಲ
ಈ ಬಾರಿ ಶುಂಠಿ ಬಿತ್ತನೆಯ ಆರಂಭದಿAದ ಇಲ್ಲಿಯತನಕವೂ ಕಾಲ ಕಾಲಕ್ಕೆ ಉತ್ತಮವಾದ ಹದ ಮಳೆ ಸುರಿದಿದೆ. ಹಾಗಾಗಿ ಶುಂಠಿ ಫಸಲು ಸ್ವಾಭಾವಿಕವಾದ ಮಳೆಯ ನೀರಿಗೆ ಉತ್ತಮವಾಗಿ ಬಂತಾದರೂ, ಕೊನೆಗೆ ಭೂಮಿಯಲ್ಲಿ ಶೀತಾಂಶ ಹೆಚ್ಚಾಗಿ ಕೊಳೆ ರೋಗ ಹಾಗು ಕರಿ ಕಡ್ಡಿಯಂತಹ ಮಾರಕ ರೋಗಕ್ಕೆ ಸಿಲುಕಿತು. ಹಾಗಾಗಿ ಕೃಷಿಕರು ಈಗ ಇರುವ ದರದಿಂದ ಬೇಸತ್ತು ಮತ್ತೆ ರಸಾಯನಿಕ ಔಷಧಿಗೆ ಹಣ ಚೆಲ್ಲಿ ಬೆಳೆ ಕಾಯುವ ಬದಲು, ಬಂದಷ್ಟು ದರ ಸಿಗಲಿ ನಮ್ಮ ಹಣೆಯ ಬರಹಕ್ಕೆ ಯಾರು ಹೊಣೆ ಎಂದುಕೊAಡು ತಮ್ಮನ್ನು ತಾವು ಶಪಿಸುತ್ತಾ ಶುಂಠಿ ಕಟಾವು ಮಾಡುತ್ತಿದ್ದಾರೆ.
ಹಳೆಯ ಶುಂಠಿಗೆ ೧೨೦೦
ಕಳೆದ ವರ್ಷ ಬಿತ್ತನೆ ಮಾಡಿರುವ ಶುಂಠಿಯನ್ನು ಕೆಲವು ಬೆಳೆಗಾರರು ಉತ್ತಮ ದರಕ್ಕಾಗಿ ಕಾದು ಕಟಾವು ಮಾಡದೇ ಭೂಮಿಯೊಳಗೆ ಬಿಟ್ಟುಕೊಂಡಿದ್ದಾರೆ. ಅಂತಹ ಹಳೆಯ ಶುಂಠಿಗೆ ಮಾರುಕಟ್ಟೆಯಲ್ಲಿ ೧೨೦೦ ರೂ ಇದೆ. ಹೊಸ ಶುಂಠಿಗೆ ಹಳೆಯ ದರ ಅರ್ಧ ದರ ೬೦೦ ಇದೆ.
ಒಟ್ಟಾರೆ ಕೊರೊನಾ ಬಳಿಕದ ಈ ವರ್ಷ ಶುಂಠಿಗೆ ಉತ್ತಮ ದರ ದೊರಕಬಹುದೇನೋ ಎಂದುಕೊAಡು ಆಸೆಗಣ್ಣಿನಿಂದ ಶುಂಠಿ ಬೆಳೆದ ಬೆಳೆಗಾರರಿಗೆ ಈ ವರ್ಷವೂ ಕೂಡ ನಷ್ಟ ಆಗುತ್ತಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಂಠಿಗೆ ಉತ್ತಮ ಬೇಡಿಕೆ ಬರಲಿ. ರೈತರ ನಿರೀಕ್ಷೆಯ ದರ ದೊರಕಲಿ.
(ವಿಶೇಷ ಲೇಖನ : ಕೆ.ಎಸ್.ಮೂರ್ತಿ)