ಸೋಮವಾರಪೇಟೆ, ಸೆ.೧೨: ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮಳೆಯಾಗುತ್ತಿದ್ದು, ವಾತಾವರಣದಲ್ಲಿ ಶೀತವೂ ಅಧಿಕವಾಗಿರುವ ಹಿನ್ನೆಲೆ ಫಸಲು ಕಟ್ಟುತ್ತಿರುವ ಕಾಫಿ ಹಾಗೂ ಕರಿಮೆಣಸು ಬೆಳೆ ನೆಲಕಚ್ಚುತ್ತಿವೆ.
ನಿರಂತರ ಮಳೆಗೆ ಕೊಳೆ ರೋಗ ವ್ಯಾಪಕ ವಾಗುತ್ತಿದ್ದು, ಕೃಷಿಕರನ್ನು ಚಿಂತೆಗೀಡು ಮಾಡಿದೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಾತಾವರಣ ಹೆಚ್ಚು ಶೀತಮಯವಾಗಿದೆ. ಕಾಫಿ ತೋಟಗಳಲ್ಲಿ ತೇವಾಂಶ ಅಧಿಕವಾಗಿದೆ.
ಆರಂಭದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಪ್ರಸಕ್ತ ವರ್ಷ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರ ಮೊಗದಲ್ಲಿ ಇದೀಗ ಚಿಂತೆ ಆವರಿಸಿದೆ. ಗಿಡಗಳಲ್ಲಿ ಫಸಲು ಹಿಡಿದಿದ್ದ ಕಾಫಿಯೊಂದಿಗೆ ಕರಿಮೆಣಸು ಸಹ ನೆಲಕಚ್ಚುತ್ತಿದ್ದು, ಕೃಷಿಯಲ್ಲಿ ನಷ್ಟ ಅನುಭವಿಸುವ ಸಂಭವ ನಿಚ್ಚಳವಾಗಿದೆ.
ಕಾಫಿ ಕೈತಪ್ಪುತ್ತಿದ್ದ ಸಂದರ್ಭ ಬೆಳೆಗಾರರ ಕೈಹಿಡಿಯುತ್ತಿದ್ದ, ಕಪ್ಪು ಬಂಗಾರವೆAದೇ ಖ್ಯಾತಿ ಪಡೆದಿರುವ ಕರಿಮೆಣಸು ಈ ಬಾರಿ ಎಲ್ಲಾ ಭಾಗದಲ್ಲೂ ಸಮೃದ್ಧವಾಗಿತ್ತು. ಪ್ರಸಕ್ತ ವರ್ಷ ಕಾಫಿಗೆ ದಾಖಲೆಯ ಬೆಲೆ ಇದ್ದು, ಮುಂದಿನ ವರ್ಷ ಒಂದು ವೇಳೆ ಬೆಲೆ ಇಳಿಕೆಯಾದರೆ ಕರಿಮೆಣಸು ನಮ್ಮ ಕೈಹಿಡಿಯುತ್ತದೆ ಎಂದೇ ಬೆಳೆಗಾರರು ಭಾವಿಸಿದ್ದರು.
ಆದರೆ ಪ್ರಸ್ತುತ ಎದುರಾಗಿರುವ ಪ್ರತಿಕೂಲ ಹವಾಮಾನದಿಂದಾಗಿ ಕರಿಮೆಣಸು ನೆಲಕ್ಕಚ್ಚುತ್ತಿವೆ. ಬಳ್ಳಿಗಳಲ್ಲಿ ಮೂಡಿದ್ದ ಗೆರೆಗಳು ಮಳೆಗೆ ಕೊಳೆತು ಕೆಳ ಬೀಳುತ್ತಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಅರೇಬಿಕಾ ಕಾಫಿ ತೋಟವನ್ನು ವರ್ಷ ಪೂರ್ತಿ ನಿರ್ವಹಣೆ ಮಾಡಬೇಕಿದೆ. ಅಧಿಕ ಕೂಲಿ, ರಸಗೊಬ್ಬರ ಬೆಲೆಯಲ್ಲಿ ಏರಿಕೆ, ಹೆಚ್ಚಿದ ನಿರ್ವಹಣಾ ವೆಚ್ಚದಿಂದಾಗಿ ಕೃಷಿ ಕಷ್ಟದಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಕರಿಮೆಣಸು ನೆಲಕ್ಕಚ್ಚುತ್ತಿದ್ದು, ನಷ್ಟ ಅನುಭವಿಸಲೇಬೇಕಾಗಿದೆ ಎಂದು ಕೂತಿ ಗ್ರಾಮದ ಡಿ.ಎ. ಪರಮೇಶ್ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.
ಸರ್ಕಾರವು ಬೆಳೆ ನಷ್ಟ ಪರಿಹಾರ ನೀಡಲು ಹಲವಷ್ಟು ಮಾನದಂಡಗಳನ್ನು ಅಳವಡಿಸಿದೆ. ಇದೀಗ ಅಕಾಲಿಕ ಮಳೆಯಿಂದಾಗಿ ಬೆಳವಣಿಗೆಯ ಹಂತದಲ್ಲಿಯೇ ಕಾಫಿ ಮತ್ತು ಕರಿಮೆಣಸು ನಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲೇ ಕಂದಾಯ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿ.ಎ. ಪರಮೇಶ್ ಒತ್ತಾಯಿಸಿದ್ದಾರೆ.