ಸೋಮವಾರಪೇಟೆ, ಸೆ.೧೨: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್‌ನ ತಾಲೂಕು ಘಟಕದ ವತಿಯಿಂದ ಎರಡನೇ ವರ್ಷದ ತಾಲೂಕು ಸಮ್ಮೆಳನ ಇಲ್ಲಿನ ಪತ್ರಿಕಾಭವನದಲ್ಲಿ ನಡೆಯಿತು.

ಸಮ್ಮೆಳನದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಅಧ್ಯಕ್ಷರಾದ ಪಿ.ಆರ್. ಭರತ್ ವಹಿಸಿದ್ದರು. ನಂತರ ಮಾತನಾಡಿ, sಸಂಘಟನೆಯ ೧೭ನೇ ಅಖಿಲ ಭಾರತ ಸಮ್ಮೆಳನ ಜನವರಿ ೧೮ರಿಂದ ೨೨ ರವರೆಗೆ ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿದೆ. ಸಮ್ಮೆಳನಕ್ಕೆ ಪೂರಕವಾಗಿ ತಾಲೂಕು ಸಮ್ಮೆಳನಗಳನ್ನು ನಡೆಸಲಾಗುತ್ತಿದೆ. ಅ. ೯ ಮತ್ತು ೧೦ ರಂದು ಜಿಲ್ಲಾ ಸಮ್ಮೆಳನ ನೆಲ್ಲಿಹುದಿಕೇರಿಯಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಸಮ್ಮೆಳನವನ್ನು ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ಉದ್ಘಾಟಿಸಿದರು. ನಂತರ ಮಾತನಾಡಿ, ದೇಶಕ್ಕೆ ಸ್ವಾತಂತ್ರö್ಯ ಬಂದರೂ, ಅದು ಎಲ್ಲರಿಗೂ ಸಿಗಲಿಲ್ಲ. ದೀನ ದಲಿತರಿಗೆ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ೧೯೫೨ರಲ್ಲಿ ಕೊಲ್ಕತ್ತದಲ್ಲಿ ಸಿಐಟಿಯು ಪ್ರಾರಂಭವಾಗಿ ೫೨ ವರ್ಷಗಳಾಯಿತು. ಇಂದಿಗೂ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದ ಸ್ಥಿತಿ ದೇಶದಲ್ಲಿದೆ ಎಂದು ಹೇಳಿದರು.

ಸಮ್ಮೆಳನದಲ್ಲಿ ಆನೆ ದಾಳಿಯಿಂದ ಮಾನವ ಜೀವ ಹಾಗೂ ರೈತರ ಕೃಷಿ ಉಳಿಸಲು ಒತ್ತಾಯ. ೨೦೧೮-೧೯ರ ಮಹಾ ಮಳೆಯಿಂದಾಗಿ ನೂರಾರು ಮನೆಗಳು ನೀರುಪಾಲಾಗಿದ್ದು, ಹಲವರು ನಿರಾಶ್ರಿತರಾಗಿದ್ದಾರೆ. ಎಲ್ಲರಿಗೂ ನಿವೇಶನ ನೀಡಬೇಕು. ತಾಲೂಕು ಕಾರ್ಮಿಕ ಇಲಾಖೆಯಲ್ಲಿ ಕೇವಲ ಒಬ್ಬರು ಮಾತ್ರ ಇದ್ದು, ಎರಡು ತಾಲೂಕುಗಳ ಕೆಲಸ ಮಾಡಬೇಕಿದೆ. ಕೂಡಲೇ ಅಧಿಕಾರಿಗಳನ್ನು ನೇಮಿಸಬೇಕು. ತಾಲೂಕಿನಲ್ಲಿ ದುಡಿಯುತ್ತಿರುವ ಹಲವಾರು ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನ ನೀಡಬೇಕು. ಎಲ್ಲಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಯಾದ ಜಿಎಸ್‌ಟಿಯನ್ನು ಜಾರಿಗೆ ತಂದು ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಜಿಎಸ್‌ಟಿಯನ್ನು ಹಿಂದಕ್ಕೆ ಪಡೆದು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಕೊಡಗು ಜಿಲ್ಲೆಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿಯನ್ನು ಪೂರ್ಣವಾಗಿ ತಿರಸ್ಕರಿಸಬೇಕೆಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಅಂಗನವಾಡಿ ನೌಕರರ ಸಂಘದ ಭಾಗೀರತಿ, ಅಕ್ಷರ ದಾಸೋಹದ ಕಾವೇರಿ, ನಾಗೇಶ್, ನವೀನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.