ಸೋಮವಾರಪೇಟೆ, ಸೆ.೧೨: ಕಳೆದ ತಾ.೪ ರಂದು ಶನಿವಾರಸಂತೆ ಪಟ್ಟಣದಲ್ಲಿ ಪರಿಶಿಷ್ಟಜಾತಿಗೆ ಸೇರಿದ ಈರಪ್ಪ ಎಂಬವರ ಮೇಲೆ ದೌರ್ಜನ್ಯವೆಸಗಿ ಜಾತಿನಿಂದನೆ ಮಾಡಿದ ಆರೋಪಿಯನ್ನು ಒಂದು ವಾರದೊಳಗೆ ಬಂಧಿಸಿ ಕ್ರಮಕೈಗೊಳ್ಳದಿದ್ದರೆ, ಶನಿವಾರಸಂತೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸಂಸ ತಾಲೂಕು ಸಂಚಾಲಕ ಎಂ.ಎಸ್. ಕುಮಾರ್, ನಾಕಲಗೋಡು ಗ್ರಾಮದ ಬಸವರಾಜು ಎಂಬವರು ಜಾತಿನಿಂದನೆ ಮಾಡಿದ್ದು, ತಾ. ೪ ರಂದು ಮೊಕದ್ದಮೆ ದಾಖಲಾಗಿದೆ. ಆದರೆ ಇದುವರೆಗೆ ಆರೋಪಿಯ ಬಂಧನವಾಗಿಲ್ಲ ಎಂದು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬAಧಪಟ್ಟAತೆ ಶನಿವಾರಸಂತೆ ಸುತ್ತಮುತ್ತಲಿನ ಕೆಲ ನಕಲಿ ದಲಿತ ನಾಯಕರು ಆರೋಪಿಯ ಪರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿರುವುದು ಖಂಡನೀಯ. ಆರೋಪಿ ಜಾತಿನಿಂದನೆ ಮಾಡಿಲ್ಲ. ಇದೊಂದು ಸುಳ್ಳು ಪ್ರಕರಣ ಎಂದು ಎಸ್.ಪಿ. ಅವರಿಗೆ ದೂರು ಸಲ್ಲಿಸಿದ್ದಲ್ಲದೆ ಪತ್ರಿಕಾ ಹೇಳಿಕೆಯನ್ನೂ ನೀಡಿದ್ದಾರೆ. ಅಲ್ಲದೆ ಈರಪ್ಪ ಅವರ ಪರವಿದ್ದ ನಮ್ಮಗಳ ಮೇಲೂ ಸುಳ್ಳು ಆರೋಪ ಹೊರಿಸಲಾಗಿದೆ ಎಂದರು.

ಅನ್ಯಾಯಕ್ಕೆ ಒಳಗಾದ ದಲಿತರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಬೇಕು. ಆದರೆ ದಲಿತಪರ ಹೋರಾಟಗಾರರ ಮೇಲೆ ಅಪವಾದ ಹೊರಿಸಿ, ಹೇಳಿಕೆ ನೀಡಿರುವುದು ಅಮಾನವೀಯ ಎಂದು ಹೇಳಿದರು.

ಹಿಂದೊಮ್ಮೆ ಹಾಸನ ಜಿಲ್ಲೆಯ ಕುಂಬರಹಳ್ಳಿಯ ಕಿಡಿಗೇಡಿಯೊಬ್ಬ ಡಾ.ಅಂಬೇಡ್ಕರ್ ಹಾಗೂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಾಗಲೂ ಇದೇ ನಾಯಕರು ಆರೋಪಿ ಪರ ನಿಂತು ಅವನಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇಂತಹ ನಾಯಕರ ಸುಳ್ಳು ಹೇಳಿಕೆಗಳಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಶನಿವಾರಸಂತೆ ಹೋಬಳಿ ಸಂಚಾಲಕ ಎಚ್.ಆರ್. ಪಾಲಾಕ್ಷ, ಸದಸ್ಯರಾದ ಪಿ.ಎನ್.ಸಂತೋಷ್, ಎ.ಎನ್. ಅವಿನಾಶ್, ಎಚ್.ಬಿ.ರಾಜೇಂದ್ರ ಇದ್ದರು.