ಮಡಿಕೇರಿ,ಸೆ.೧೧: ಕೊಯನಾಡಿನಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟೆಯಿಂದಾಗಿ ಆ ಭಾಗದ ನಿವಾಸಿಗಳ ಮನೆಗಳು ಮುಳುಗಡೆಯಾಗುತ್ತಿದ್ದು, ಕಿಂಡಿ ಅಣೆಕಟ್ಟೆಯನ್ನು ತೆರವುಗೊಳಿಸಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಹಾಗೂ ಸಂತ್ರಸ್ತರು ಆಗ್ರಹಿಸಿದ್ದಾರೆ.

ಸಂತ್ರಸ್ತರ ಪರವಾಗಿ ಮಾತನಾಡಿದ ಗ್ರಾ.ಪಂ.ಸದಸ್ಯ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವಕ್ತಾರ ಪಿ.ಎಲ್. ಸುರೇಶ್ ಕೊಯನಾಡು ಹಾಗೂ ಸಂಪಾಜೆ ಭಾಗದ ಗ್ರಾಮಸ್ಥರು ಯಾರೂ ಕೂಡ ಕಿಂಡಿ ಅಣೆಕಟ್ಟೆ ಬೇಕೆಂದು ಕೇಳಿಲ್ಲ. ಅಣೆಕಟ್ಟೆ ಅವಶ್ಯಕತೆ ಇಲ್ಲವೆಂದು ಹಿಂದಿನ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ವೀಣಾ ಅಚ್ಚಯ್ಯ, ಪ್ರಿಯಾಂಕ ಖರ್ಗೆ ಅವರುಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸ್ಥಳೀಯ ಶಾಸಕರು, ಸರಕಾರ ಅಣೆಕಟ್ಟೆ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಕೊಯನಾಡು ಹಾಗೂ ಸಂಪಾಜೆ ಭಾಗದ ಬಡ ಕಾರ್ಮಿಕರ ಮನೆಗಳು ಮುಳುಗಡೆಯಾಗುತ್ತಿವೆ. ಎರಡು ಬಾರಿ ಅನಾಹುತ ಸಂಭವಿಸಿದರೂ ಸೂಕ್ತ ಕ್ರಮ ಕೈಗೊಳ್ಳದೆ ಕೇವಲ ೧೦ಸಾವಿರ ಪರಿಹಾರ ಮಾತ್ರ ನೀಡಲಾಗಿದೆ. ಆದರೂ ಬಿಜೆಪಿಯವರು ಅಣೆಕಟ್ಟೆಯಿಂದ ಅನುಕೂಲವಾಗಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕರಿಗೆ ಕಾಳಜಿ ಇದ್ದರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಬೇಕು. ಬೆಟ್ಟ ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಿದರೆ ಅಲ್ಲಿಗೆ ತೆರಳಲು ಯಾರೂ ಸಿದ್ಧರಿಲ್ಲ. ಪ್ರಸ್ತುತ ಗುರುತಿಸಲಾಗಿರುವ ಜಾಗದ ಬಳಿ ಹಲವು ಬಾರಿ ಭೂಕಂಪನವಾಗಿ ಬಿರುಕು ಬಿಟ್ಟಿದೆ. ವಾಸಕ್ಕೆ ಯೋಗ್ಯವಾದ ಜಾಗದಲ್ಲಿ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತ ಲೋಕೇಶ್ ಮಾತನಾಡಿ, ನಮ್ಮ ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಉತ್ತಮ ಜಾಗ ನೀಡುವಂತೆ ಶಾಸಕರಿಗೆ ಮನವಿ ಮಾಡಿಕೊಂಡಿದ್ದೆವು. ಸೂಕ್ತವಾದ ಜಾಗ ನೀಡಿದರೆ ಅಲ್ಲಿಗೆ ಹೋಗುತ್ತೇವೆ, ಇಲ್ಲವಾದಲ್ಲಿ ಕೃಷಿ ಭೂಮಿ, ದೈವಸ್ಥಾನಗಳನ್ನು ಬಿಟ್ಟು ಹೊಗಲು ತಯಾರಿಲ್ಲ. ಕಾಳಜಿ ಕೇಂದ್ರಕ್ಕೂ ತೆರಳುವದಿಲ್ಲ ಎಂದು ಹೇಳಿದರು. ಶಾಸಕರ ಬಗ್ಗೆ ನಾವುಗಳು ಯಾರು ಕೂಡ ಅವಾಚ್ಯ ಪದಗಳಿಂದ ನಿಂದಿಸಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಹೊಸೂರು ಸೂರಜ್ ಮಾತನಾಡಿ, ಜನಪ್ರತಿನಿಧಿಗಳು, ಸರಕಾರ ಜನರ ಜೀವನ ಮಟ್ಟ ಸುಧಾರಣೆ ಮಾಡುವತ್ತ ಗಮನ ಹರಿಸಬೇಕು, ಅಣೆಕಟ್ಟೆ ಇನ್ನೂ ಕೂಡ ಉದ್ಘಾಟನೆಯಾಗಿಲ್ಲ, ಆದರೂ ಅಂತರ ಜಲಮಟ್ಟದಲ್ಲಿ ಏರಿಕೆಯಾಗಿದೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಕಿಂಡಿ ಅಣೆಕಟ್ಟೆ ಕೇಂದ್ರ ಸರಕಾರದ ಉತ್ತಮ ಯೋಜನೆ ಯಾಗಿದ್ದರೂ ಅದನ್ನು ಎಲ್ಲಿ ಅನುಷ್ಠಾನಗೊಳಿಸಬೇಕು ಎಂಬದರ ಬಗ್ಗೆ ಚಿಂತನೆ ಮಾಡಬೇಕು. ಕೊಯನಾಡು, ಸಂಪಾಜೆ ಭಾಗಕ್ಕೆ ಸೇತುವೆ ಮಾತ್ರ ಸಾಕಾಗಿತ್ತು, ಕಿಂಡಿ ಅಣೆಕಟ್ಟೆ ಬೇಡವಾಗಿತ್ತು. ಕಿಂಡಿ ತೆರವು ಮಾಡಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು. ಸಂಪಾಜೆ ವ್ಯಾಪ್ತಿಯ ೫ಕಿ.ಮೀ. ವ್ಯಾಪ್ತಿಯಲ್ಲಿ ೮ರಿಂದ ೧೦ ಕಿಂಡಿ ಅಣೆಕಟ್ಟೆಗಳನ್ನು ನಿರ್ಮಾಣ ಮಾಡಿರುವದನ್ನು ಗಮನಿಸಿದರೆ ಇದರಲ್ಲಿ ಅವ್ಯವಹಾರದ ವಾಸನೆ ಬೀರುತ್ತಿದೆ, ಈ ಬಗ್ಗೆ ತನಿಖೆಯಾಗಬೇಕೆಂದೂ ಅವರು ಆಗ್ರಹಿಸಿದರು.

ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್ ಸಂಪಾಜೆ, ಸಂತ್ರಸ್ತರಾದ ವೇದಾವತಿ, ನಿತಿನ್ ಹಾಜರಿದ್ದರು.