ಮಡಿಕೇರಿ, ಸೆ. ೧೦: ಕೊಯನಾಡಿ ನಲ್ಲಿ ಕಿಂಡಿ ಅಣೆಕಟ್ಟೆಯಿಂದಾಗಿಯೇ ಅನಾಹುತ ನಡೆದಿದೆ ಎಂಬ ಆಪಾದನೆಗಳನ್ನು ಸ್ಥಳೀಯ ನಿವಾಸಿಯೂ ಆಗಿರುವ ಬಿಜೆಪಿ ಮುಖಂಡ ಸುಬ್ರಮಣ್ಯ ಉಪಾಧ್ಯಾಯ ಅಲ್ಲಗಳೆದಿದ್ದಾರೆ. ಈ ಬಾರಿ ಆದ ಪ್ರಕೃತಿ ವಿಕೋಪದಿಂದಾಗಿಯೇ ಸಾಕಷ್ಟು ಹಾನಿಯಾಗಿದೆ ಹೊರತು, ಊರಿನಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟೆಯಿಂದಾಗಿಯೇ ದುರಂತ ನಡೆದಿದೆ ಎನ್ನುವುದು ಸರಿಯಲ್ಲ. ಕಿಂಡಿ ಅಣೆಕಟ್ಟೆಗೆ ಸಂಬAಧಿಸಿದAತೆ, ಶಾಸಕ ಬೋಪಯ್ಯ ವಿರುದ್ಧ ಕೆಲವರು ಅನುಚಿತ ವರ್ತನೆ ತೋರುತ್ತಿರುವುದು ಖಂಡನೀಯ ಎಂದು ಸುಬ್ರಮಣ್ಯ ಉಪಾಧ್ಯಾಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಿಂಡಿ ಅಣೆಕಟ್ಟೆಯಿಂದ ಗ್ರಾಮಕ್ಕೆ ಸಾಕಷ್ಟು ಪ್ರಯೋಜನವಾಗಿದೆ. ಸೇತುವೆಯೇ ಇಲ್ಲದಿದ್ದ ಸ್ಥಳದಲ್ಲಿ ಅಣೆಕಟ್ಟೆ ನಿರ್ಮಾಣದ ಬಳಿಕ ಜನರಿಗೆ ಅನುಕೂಲ ಸಿಕ್ಕಿದೆ. ಹೀಗಿದ್ದರೂ, ಜನರ ದಾರಿ ತಪ್ಪಿಸುವ ಉದ್ದೇಶದಿಂದ ಮತ್ತು ಶಾಸಕರ ಜನಪ್ರಿಯತೆ ಸಹಿಸಲಾಗದೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಪೈಕಿ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಕಾರ್ಯಕರ್ತರೂ ಇದ್ದು, ಶಾಸಕರ ಮಾನಹಾನಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಕೆ.ಜಿ. ಬೋಪಯ್ಯ ಹಿರಿಯ ಶಾಸಕರು. ಅಂತವರ ವಿರುದ್ಧ ಕೀಳು ಮಟ್ಟದ ಭಾಷೆ ಬಳಸಲಾಗಿದೆ. ಎಲ್ಲ ಸರ್ಕಾರಿ ಸೌಲಭ್ಯ ಪಡೆದವರೇ ಆರೋಪ ಮಾಡುತ್ತಿರುವುದು ವಿಪರ್ಯಾಸ ಎಂದ ಸುಬ್ರಮಣ್ಯ ಉಪಾಧ್ಯಾಯ, ಕಾಂಗ್ರೆಸ್ ಪಕ್ಷದ ಕೆಲವರು ಬೆಡ್‌ಶೀಟ್, ಕಂಬಳಿಗಳನ್ನು ಹಂಚಿಕೆ ಮಾಡುತ್ತಿದ್ದು, ಇದರಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ಕುಟುಕಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ೨೦೧೮ರ ದುರಂತದಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಶಾಸಕರು ಹಿಂದೆಯೇ ಅರಣ್ಯ ಇಲಾಖೆಗೆ ಸೂಚಿಸಿದ್ದರೂ, ತೆರವು ಗೊಳಿಸದ ಹಿನ್ನೆಲೆಯಲ್ಲಿ ಈ ಬಾರಿಯ ಪ್ರವಾಹಕ್ಕೆ ಅವೆಲ್ಲ ಕೊಚ್ಚಿಕೊಂಡು ಬಂದಿವೆ ಎಂದರು. ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಏನು ಪರಿಹಾರ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಕುಮಾರ್ ಚಿದ್ಕಲ್, ನವೀನ್ ಕುಮಾರ್, ಜಯಪ್ರಸಾದ್, ಶಿವ ಪ್ರಸಾದ್, ಲೋಕಯ್ಯ ಹಾಜರಿದ್ದರು.