ಮಡಿಕೇರಿ, ಸೆ.೯: ಸುಪ್ರಸಿದ್ಧಿ ಹೊಂದಿರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಜನರ ಸಹಭಾಗಿತ್ವದೊಂದಿಗೆ ಜನೋತ್ಸವವಾಗಿ ಆಚರಿಸಲಾಗುತ್ತಿದ್ದು, ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ. ಹತ್ತು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗಮನ ಸೆಳೆಯುವ ಆಚರಣೆ ಕಳೆದ ನಾಲ್ಕು ವರ್ಷಗಳಿಂದ ಕಳೆಗುಂದಿತ್ತು. ಈ ಬಾರಿ ಸರಕಾರದ ಅನುದಾನ ಬಂದಿದ್ದರೂ ದಸರಾ ಕಾರ್ಯಕ್ರಮಗಳಿಗೆ ಇನ್ನೂ ಕೂಡ ಚಾಲನೆ ಸಿಕ್ಕಿದಂತಿಲ್ಲ. ಅನುದಾನದ ಹಣ ಹಂಚಿಕೆ ಹಾಗೂ ರಾತ್ರಿ ಹತ್ತು ಗಂಟೆ ಮೇಲೆ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿರುವದರಿಂದ ಉಪ ಸಮಿತಿಗಳು ಇನ್ನೂ ಕೂಡ ಯಾವದೇ ತಯಾರಿ ಮಾಡಿಕೊಂಡAತೆ ಕಾಣುತ್ತಿಲ್ಲ.

ಸಾಂಪ್ರದಾಯಿಕ ಕರಗ ಉತ್ಸವ ಹಾಗೂ ಕಣ್ಮನ ಸೆಳೆಯುವ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಕಲೆ, ಸಾಹಿತ್ಯ, ಕ್ರೀಡಾ ಚಟುವಟಿಕೆಗಳಿಗೂ ಪ್ರಾತಿನಿಧ್ಯ ನೀಡುತ್ತಾ ಬರಲಾಗುತ್ತಿದೆ. ಈ ಸಂಬAಧ ಉಪ ಸಮಿತಿಗಳನ್ನೂ ಕೂಡ ರಚನೆ ಮಾಡಲಾಗುತ್ತದೆ.

(ಮೊದಲ ಪುಟದಿಂದ) ಇವುಗಳ ಪೈಕಿ ಪ್ರಮುಖವಾದುದು ಹತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು. ದಸರಾ ಆರಂಭವಾಗಲು ಇನ್ನು ಕೇವಲ ೧೫ ದಿನಗಳಷ್ಟೇ ಉಳಿದಿದ್ದು, ಸಮಿತಿಗಳು ಯಾವದೇ ಸಿದ್ಧತೆ ಮಾಡಿಕೊಂಡಿಲ್ಲ. ಇಷ್ಟರಲ್ಲಾಗಲೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾ ತಂಡಗಳಿಗೆ ಆಹ್ವಾನದೊಂದಿಗೆ ಕಾರ್ಯಕ್ರಮದ ತಯಾರಿ ಕೂಡ ಆಗಿರುತ್ತಿತ್ತು.

ಅನುದಾನದ ಆತಂಕ

ಈಗಾಗಲೇ ಸರಕಾರ ಮಡಿಕೇರಿ ದಸರಾಗೆ ರೂ.ಒಂದು ಕೋಟಿ ಮಂಜೂರು ಮಾಡಿದೆ. ಈ ಹಣದಲ್ಲಿ ಶೇ.೧೫ರಷ್ಟು ಜಿಎಸ್‌ಟಿಗೆ ಕಡಿತಗೊಳ್ಳಲಿದೆ. ಇನ್ನುಳಿದ ಹಣದಲ್ಲಿ ರೂ.೨೫ ಲಕ್ಷ ಉಳಿಕೆ ಮಾಡಿ ಇದೀಗ ಗಾಂಧಿ ಮೈದಾನದಲ್ಲಿ ನಿರ್ಮಿಸಲಾಗುತ್ತಿರುವ ಶಾಶ್ವತ ಚಾದರಕ್ಕೆ (ಸ್ಟೆçಸ್)ಮೀಸಲಿಡಲು ತೀರ್ಮಾನಿಸಿರುವದಾಗಿ ಹೇಳಲಾಗುತ್ತಿದೆ. ಬಾಕಿ ಉಳಿದ ಹಣದಲ್ಲಿ ದಶ ಮಂಟಪಗಳು ಹಾಗೂ ಕರಗ ದೇವಾಲಯಗಳಿಗೂ ನೀಡಬೇಕಿದೆ. ಇದರೊಂದಿಗೆ ವೇದಿಕೆ ನಿರ್ಮಾಣ, ನಗರ ಅಲಂಕಾರ, ಬಹುಮಾನ, ನೆನಪಿನ ಕಾಣಿಕೆಗಳು, ಕಲಾವಿದರುಗಳಿಗೆ ಸಂಭಾವನೆ ಸೇರಿದಂತೆ ಇತ್ಯಾದಿ ಕಾರ್ಯಗಳಿಗೂ ಹಣ ಒದಗಿಸಬೇಕಿದೆ. ಹಾಗಾಗಿ ಎಷ್ಟು ಮೊತ್ತದ ಬಜೆಟ್‌ನಲ್ಲಿ ಕಾರ್ಯಕ್ರಮದ ರೂಪುರೇಷೆ ಹಮ್ಮಿಕೊಳ್ಳಬೇಕೆಂಬ ಗೊಂದಲದಲ್ಲಿ ಉಪ ಸಮಿತಿಗಳ ಪದಾಧಿಕಾರಿಗಳಿದ್ದಾರೆ.

ಅದೂ ಅಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ ವೇಳೆ ನಡೆಯುವದರಿಂದ ಬೆಳಕು ಹಾಗೂ ಧ್ವನಿವರ್ಧಕಗಳು ಅತ್ಯವಶ್ಯವಾಗಿವೆ. ಇದೀಗ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿರುವದರಿಂದ ಕಾರ್ಯಕ್ರಮ ನಡೆಸಬೇಕೋ ಬೇಡವೋ ಎಂಬ ಅತಂತ್ರ ಸ್ಥಿತಿ ಸಾಂಸ್ಕೃತಿಕ ಸಮಿತಿಯದ್ದಾಗಿದೆ. ಇನ್ನೂ ಕ್ರೀಡೆ ಹಾಗೂ ಕವಿಗೋಷ್ಠಿ ಸಮಿತಿಯವರ ಪರಿಸ್ಥಿತಿ ಕೂಡ ಅದೇ ರೀತಿಯದ್ದಾಗಿದೆ. ಸಮಿತಿಗಳಿಗೆ ಲಭಿಸುವ ಅನುದಾನದ ಆಧಾರದಲ್ಲಿ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಸಮಿತಿಯವರು ಚರ್ಚೆ ಮಾಡಿಕೊಳ್ಳುತ್ತಿದ್ದಾರೆ. ದಸರಾ ಸಮಿತಿಯ ತೀರ್ಮಾನದ ಬಳಿಕ ಕಾರ್ಯಕ್ರಮಗಳ ರೂಪು ರೇಷೆ ಸಿದ್ಧಗೊಳ್ಳಲಿರುವದಾಗಿ ತಿಳಿದುಬಂದಿದೆ.