ಮಡಿಕೇರಿ, ಸೆ. ೧೦: ನಿವೇಶನ ಹಾಗೂ ವಸತಿ ರಹಿತ ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿರುವ ಆದಿವಾಸಿ ಕುಟುಂಬದವರು ಆದಷ್ಟು ಶೀಘ್ರ ಆಧಾರ್ ಕಾರ್ಡ್, ಜಾತಿ, ಆದಾಯ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಮತ್ತಿತರ ದಾಖಲೆಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಸಲಹೆ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟ, ಎಸ್ಟೇಟ್‌ಗಳಲ್ಲಿನ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ನಿವೇಶನ, ವಸತಿ ರಹಿತ ಕುಟುಂಬದವರಿAದ ಮಾಹಿತಿ ಪಡೆದು ಅವರು ಮಾತನಾಡಿದರು.

ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ನಿವೇಶನ ಗುರುತಿಸಲಾಗುತ್ತಿದೆ. ಆದಷ್ಟು ಬೇಗ ಅಗತ್ಯ ದಾಖಲಾತಿಗಳನ್ನು ಪಡೆದಲ್ಲಿ ನಿವೇಶನ ಹಂಚಿಕೆಗೆ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆದಿವಾಸಿ ಮುಖಂಡರಾದ ಪುಷ್ಪ ಅವರು ಲೈನ್‌ಮನೆಗಳಿಂದ ನಾವುಗಳು ಈಗಾಗಲೇ ಹೊರಬಂದು ಪೊನ್ನಂಪೇಟೆ ಮತ್ತು ಮಾಯಾಮುಡಿಯಲ್ಲಿ ಧರಣಿ ಮಾಡುತ್ತಿದ್ದೇವೆ, ಮತ್ತೆ ಲೈನ್‌ಮನೆಗೆ ಹೋಗಲು ಆಗುವುದಿಲ್ಲ.

(ಮೊದಲ ಪುಟದಿಂದ) ಆದ್ದರಿಂದ ನಮಗೆ ನಿವೇಶನ ಕಲ್ಪಿಸಬೇಕು ಎಂದು ಅವರು ಮಾಡಿದರು.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಬಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ೬ ಎಕರೆ ಜಾಗ ಗುರುತಿಸಲಾಗಿದೆ. ನಿವೇಶನ ರಹಿತ ಕುಟುಂಬದಲ್ಲಿ ದಾಖಲಾತಿ ಇದ್ದವರಿಗೆ ನಿವೇಶನ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ತಾ.ಪಂ. ಇಓಗಳು ನಿವೇಶನ ರಹಿತರ ಪಟ್ಟಿಯನ್ನು ಜಿ.ಪಂ. ಸಿಇಓ ಅವರಿಗೆ ಸಲ್ಲಿಸಿ ಬಳಿಕ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮನೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ಮಾಡಿದರು.

ಜಿಲ್ಲೆಯಲ್ಲಿನ ನಿವೇಶನ ರಹಿತರ ಪಟ್ಟಿಯನ್ನು ಜಿಲ್ಲಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸಂಬAಧಪಟ್ಟವರಿಗೆ ಸೂಚಿಸಿದರು.

ಆದಿವಾಸಿ ಮುಖಂಡರಾದ ಗಪ್ಪು ಅವರು ಆಧಾರ್ ಕಾರ್ಡ್ ಮತ್ತಿತರ ಮೂಲ ದಾಖಲಾತಿಗಳನ್ನು ಪಡೆಯಲು ಪ್ರಯತ್ನಿಸಲಾಗಿದೆ. ಈ ಕಾರ್ಯ ಇನ್ನೂ ಚುರುಕುಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುಷ್ಪ ಅವರು ಆಧಾರ್ ಕಾರ್ಡ್ ಮಾಡಿಸಲು ಹಣ ಕೇಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಆಧಾರ್ ಕಾರ್ಡ್ ನೋಂದಣಿ ವಿಭಾಗದ ಜಿಲ್ಲಾ ಸಮಾಲೋಚಕರಾದ ರಾಕೇಶ್ ಅವರು ಹೊಸದಾಗಿ ಆಧಾರ್ ಕಾರ್ಡ್ ನೋಂದಣಿ ಕಾರ್ಯವು ಉಚಿತವಾಗಿದೆ. ಆದರೆ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಲು ರೂ. ೧೦೦ ಮತ್ತು ವಿಳಾಸ ಬದಲಾವಣೆ ರೂ. ೫೦ ಶುಲ್ಕ ಪಾವತಿಸಬೇಕಿದೆ ಎಂದು ಸಭೆಯಲ್ಲಿ ತಿಳಿಸಿದರು.

ಆದಿವಾಸಿ ಪ್ರತಿನಿಧಿ ರಾಣಿ ಅವರು ಅಮ್ಮತ್ತಿ, ಹೊಸೂರಿನಲ್ಲಿ ೨೫೦ ಕುಟುಂಬಗಳು, ಮಾಯಮುಡಿಯಲ್ಲಿ ೯೮ ಕುಟುಂಬಗಳು, ಆತೂರು ಬಳಿ ೧೬೨ ಕುಟುಂಬಗಳು, ಬಾಳೆಲೆ-ಪೊನ್ನಪ್ಪಸಂತೆ ಮತ್ತು ಬಿರುನಾಣಿ ಬಳಿ ತಲಾ ೩೦ ಕುಟುಂಬಗಳು ಲೈನ್‌ಮನೆಗಳಲ್ಲಿ ವಾಸಿಸುತ್ತಿದ್ದೆವು, ಈ ಕುಟುಂಬಗಳಿಗೆ ನಿವೇಶನ ಒದಗಿಸಬೇಕು ಎಂದು ಕೋರಿದರು.’

ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ ಮಾತನಾಡಿ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳಲ್ಲಿ ಸಮರ್ಪಕ ದಾಖಲೆಗಳು ಇರುವುದಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ ಸಾಧ್ಯವಾಗುತ್ತಿದೆ ಎಂದರು.

ಈಗಾಗಲೇ ಜಿಲ್ಲೆಯ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳ ಸರ್ವೆ ಮಾಡಲಾಗಿದ್ದು, ಒಟ್ಟು ೪,೭೪೫ ಕುಟುಂಬಗಳನ್ನು ಗುರುತಿಸಲಾಗಿದೆ. ಇವರಲ್ಲಿ ೧೪,೨೨೧ ಜನರಿದ್ದು, ೯,೨೨೭ ಸದಸ್ಯರಿಗೆ ಆಧಾರ್ ಕಾರ್ಡ್ ಮತ್ತು ೧೧,೨೪೪ ಜನರಿಗೆ ಮತದಾರರ ಗುರುತಿನ ಚೀಟಿ ಇರುವುದಿಲ್ಲ. ೧೩,೧೨೮ ಜನರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇಲ್ಲ. ೨,೭೦೨ ಜನರಿಗೆ ಪಡಿತರ ಚೀಟಿ ಇರುವುದಿಲ್ಲ. ೧,೪೮೧ ಜನರು ಇನ್ನೂ ಬ್ಯಾಂಕ್ ಖಾತೆ ಹೊಂದಿಲ್ಲ ಎಂದು ವಿವರಿಸಿದರು.

ಪೊನ್ನಂಪೇಟೆ ತಾಲೂಕು ಐಟಿಡಿಪಿ ಇಲಾಖಾ ಅಧಿಕಾರಿ ಗುರುಶಾಂತಪ್ಪ ಅವರು ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ಆದಿವಾಸಿ ಜನರಿಗಾಗಿ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ಮಾಯಮುಡಿ ಗ್ರಾಮದ ಬೆಳ್ಯಪ್ಪ ಇತರರು ನಿವೇಶನ ಕೊಡಿಸುವ ಸಂಬAಧ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಜಗದೀಶ್, ತಹಶೀಲ್ದಾರ್‌ರಾದ ಪಿ.ಎಸ್. ಮಹೇಶ್, ಪ್ರಶಾಂತ್, ಅರ್ಚನಾ ಭಟ್, ಪ್ರಕಾಶ್, ಎಸ್.ಎನ್. ನರಗುಂದ, ತಾ.ಪಂ. ಇಒಗಳಾದ ಅಪ್ಪಣ್ಣ, ಶೇಖರ್, ಜಯಣ್ಣ, ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.