ಸಿದ್ದಾಪುರ, ಸೆ. ೧೦: ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸಂಭ್ರಮದಿAದ ಆಚರಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಸಿದ್ದಾಪುರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪದಿಂದ ಚೆಂಡೆ ಮೇಳ, ಕಲಶ ಹೊತ್ತ ಮಹಿಳೆಯರೊಂದಿಗೆ ಮೆರವಣಿಗೆ ಮೂಲಕ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತರಲಾಯಿತು.

ನಂತರ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಕೊಡಗು ಯೂನಿಯನ್ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಿದ್ದಾಪುರದ ನಾರಾಯಣ ಗುರು ಸಭಾಂಗಣದಲ್ಲಿ (ಸ್ವರ್ಣಮಾಲಾ) ನಡೆದ ೧೬೮ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮನಗರ ಜಿಲ್ಲೆಯ ಸೋಲೂರು ಗ್ರಾಮದ ಆರ್ಯ ಈಡಿಗ ಮಹಾ ಸಂಸ್ಥಾನದ ಶ್ರೀ ರೇಣುಕಾ ಪೀಠ, ಶ್ರೀ ನಾರಾಯಣ ಗುರು ಮಠದ ವಿಖ್ಯಾತನಂದ ಸ್ವಾಮೀಜಿ ಅವರು ಮಾತನಾಡಿ, ನಾರಾಯಣ ಗುರು ಅವರ ತತ್ವ ಸಂದೇಶಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಸಮಸಮಾಜ

(ಮೊದಲ ಪುಟದಿಂದ) ನಿರ್ಮಾಣಕ್ಕೆ ಪ್ರಯತ್ನಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರ ಆದರ್ಶ ಮತ್ತು ಚಿಂತನೆಗಳನ್ನು ತಿಳಿದುಕೊಂಡು, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ಕರೆ ನೀಡಿದರು. ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನಾರಾಯಣ ಗುರು ಅವರು ಮನುಕುಲದ ಕೆಡುಕುಗಳನ್ನು ತೊಡೆದು ಹಾಕಲು ಪ್ರಯತ್ನಿಸಿದರು ಎಂದು ತಿಳಿಸಿದರು.

ಸೋಮವಾರಪೇಟೆ ತಾಲೂಕಿನಲ್ಲಿ ಮಲೆಯಾಳಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ಕಾಯ್ದಿರಿಸಿರುವ ಅನುದಾನವನ್ನು ಇನ್ನೂ ಬಳಸಿಕೊಂಡಿಲ್ಲ ಎಂದು ತಿಳಿಸಿದ ಅವರು ಶಾಸಕರ ಅನುದಾನದಿಂದ ಇನ್ನಷ್ಟು ಹೆಚ್ಚಿನ ಅನುದಾನ ನೀಡಿ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ನಾರಾಯಣ ಗುರು ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ನಾರಾಯಣ ಗುರುಗಳು ವಿದ್ಯೆಯಿಂದ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ಪ್ರತಿಪಾದಿಸಿದ್ದರು ಎಂದು ಅವರು ನುಡಿದರು.

ಜಿಲ್ಲಾ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಮಾತನಾಡಿ, ನಾರಾಯಣ ಗುರು ಅವರ ತತ್ವ ಸಿದ್ಧಾಂತಗಳು ಸಾಮಾಜಿಕ ಪರಿವರ್ತನೆಗೆ ಸಹಕಾರಿಯಾಗಿದೆ. ನಾರಾಯಣ ಗುರು ಅವರ ಸಂದೇಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದರು.

ಮಾಜಿ ಅಡ್ವಕೇಟ್ ಜನರಲ್ ಹಾಗೂ ಕೆ.ಪಿ.ಸಿ.ಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ನಾವೆಲ್ಲ ಒಂದೇ ಜಾತಿ, ಒಂದೇ ಕುಲ ಎಂದು ಪ್ರತಿಪಾದನೆ ಮಾಡಿದ ಶ್ರೀ ನಾರಾಯಣ ಗುರುಗಳ ಚಳುವಳಿಯಿಂದಾಗಿ ಕೇರಳ ರಾಜ್ಯದಲ್ಲಿ ಹೆಚ್ಚಿನ ಮಂದಿ ವಿದ್ಯಾವಂತರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ದಾಪುರದ ಕೊಡಗು ಯೂನಿಯನ್ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಎಸ್.ಎನ್.ಡಿ.ಪಿ. ಸಂಸ್ಥೆಯು ಜಿಲ್ಲಾಡಳಿತ ಹಾಗೂ ಇತರರ ಸಹಕಾರದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾಜದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೀನಾ ತುಳಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಕೊಡಗು ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷರಾದ ರಘು ಆನಂದ್, ಹಿಂದೂ ಮಲೆಯಾಳಿ ಸಮಾಜದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಎಂ. ವಿಜಯ, ನಾರಾಯಣ ಗುರು ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಆರ್. ಗಿರೀಶ್, ಕಾರ್ಯದರ್ಶಿ ರೀಶಾ ಸುರೇಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜಾ ಇತರರು ಇದ್ದರು.

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಪಡೆದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಾರಾಯಣ ಗುರು ಅವರ ಕುರಿತು ಪುಸ್ತಕ ಬರೆದಿರುವ ಸಾಹಿತಿ ಡಾ. ಜೆ. ಸೋಮಣ್ಣ, ಸುನಿತಾ ಲೋಕೇಶ್, ರಾಣಿ ಅರುಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಧ್ವಜಾರೋಹಣವನ್ನು ದಾಸವಾಳದ, ಮ್ಯಾಗ್‌ಡೂರ್ ಎಸ್ಟೇಟ್ ಮಾಲೀಕ ಟಿ.ಕೆ. ಸೋಮನ್ ನೆರವೇರಿಸಿದರು. ೭ನೇ ಹೊಸಕೋಟೆಯ ಪ್ಯಾಡಿಂಗ್ಟನ್ ರೆಸಾರ್ಟ್ನ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎಲ್. ಪ್ರವೀಣ್ ಮೆರವಣಿಗೆಗೆ ಚಾಲನೆ ನೀಡಿದರು. ಉಪನ್ಯಾಸಕಿ ಸುನೀತಾ ಗಿರೀಶ್ ಹಾಗೂ ಸತೀಶ್ ಅವರು ನಿರೂಪಿಸಿದರು. ಕಾರ್ಯದರ್ಶಿ ಪ್ರೇಮಾನಂದ ಸ್ವಾಗತಿಸಿದರೆ, ರವಿ ಪ್ರಾರ್ಥಿಸಿದರು. ರೀಶಾ ಸುರೇಂದ್ರ ವಂದಿಸಿದರು.

ಚಿತ್ರ ವರದಿ: ವಾಸು ಎ.ಎನ್.