ಶನಿವಾರಸಂತೆ, ಸೆ. ೪: ಮೊಹಲ್ಲಾದ ಆಡಳಿತ ಮಂಡಳಿಗಳ ಕಾರ್ಯವ್ಯಾಪ್ತಿ ಮಸ್ಜಿದ್ ಮತ್ತು ಮದ್ರಸಗಳಿಗೆ ಸೀಮಿತವಾಗದೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುವಂತಾಗಬೇಕು ಎಂದು ಕೇರಳದ ಸಾಲೀಂ ಪೈಝಿ ಅಭಿಪ್ರಾಯಪಟ್ಟರು. ಸಮೀಪದ ಗುಡುಗಳಲೆಯ ಬದ್ರಿಯಾ ಶಾದಿ ಮಹಲ್‌ನಲ್ಲಿ ಮಡಿಕೇರಿ ರೇಂಜ್ ಜಂಇಯ್ಯತುತ್ ಮುಅಲ್ಲಿಮೀನ್ ವತಿಯಿಂದ ಜಮಾಅತ್ ಆಡಳಿತ ಮಂಡಳಿ ಸದಸ್ಯರು ಮತ್ತು ಮದ್ರಸ ಅಧ್ಯಾಪಕರಾದ ಉಲಾಮಗಳ ಸಂಗಮ ಹಾಗೂ ಮಡಿಕೇರಿ ರೇಂಜ್ ಆಡಳಿತ ಮಂಡಳಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸುವ ಸದಸ್ಯರ ಸೇವಾ ಮನೋಭಾವ ಶ್ಲಾಘನೀಯವಾಗಿದ್ದು, ಮೊಹಲ್ಲಾಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಡಜನರಿಗೆ, ರೋಗಿಗಳಿಗೆ ನೆರವಾಗುತ್ತಾ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದರು. ರೇಂಜ್ ಜಂಇಯ್ಯತುತ್ ಉಲಾಮಾ ಅಧ್ಯಕ್ಷ ಕುಶಾಲನಗರದ ಸೂಫಿ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ಬ್ಯಾಡಗೊಟ್ಟ ಸುಲೈಮಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೇತಾರ ಉಮರ್ ಪೈಝಿ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಎ. ಯಾಕೂಬ್, ಸಮಿತಿ ಕಾರ್ಯದರ್ಶಿ ಅಬ್ದುಲ್ ಮಜೀದ್, ಉಲಮಾ ಕಾರ್ಯದರ್ಶಿ ಪೈಝಲ್ ಪೈಝಿ, ಇಕ್ಬಾಲ್ ಮೌಲವಿ, ಜಹೀರ್ ನಿಜಾಮಿ, ಹಸೈನ್ ಮೌಲವಿ, ತಂಬ್ಲಿಕ್ ದಾರಿಮಿ, ಹಮೀದ್ ಮೌಲವಿ, ರಜಾಕ್ ಪೈಝಿ, ಹಮೀದ್, ಶರೀಫ್ ಉಪಸ್ಥಿತರಿದ್ದರು.