ಮಡಿಕೇರಿ, ಸೆ. ೪: ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮೈಸೂರಿನ ಮಣಿಪಾಲ ಆಸ್ಪತ್ರೆ ಸಹಯೋಗದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು, ಕುಟುಂಬ ವರ್ಗದವರಿಗೆ ಆರೋಗ್ಯ ಸಿರಿ ಯೋಜನೆಯಡಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಲಾಗಿತ್ತು.
ಮಡಿಕೇರಿ ರೋಟರಿ ಸಭಾಂಗಣ ದಲ್ಲಿ ಆಯೋಜಿತ ಆರೋಗ್ಯ ಸಿರಿ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಸಹಾಯಕ ರಾಜ್ಯಪಾಲ ರತನ್ ತಮ್ಮಯ್ಯ, ರೋಟರಿ ಸದಸ್ಯರು ಸಮಾಜದ ಹಿತ ಚಿಂತನೆಗಾಗಿ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಲೇ ಬಂದಿದ್ದಾರೆ. ಇಂಥ ರೋಟರಿ ಸದಸ್ಯರ ಆರೋಗ್ಯ ತಪಾಸಣೆ ಕೂಡ ಮಹತ್ವದ್ದಾಗಿದ್ದು ಈ ನಿಟ್ಟಿನಲ್ಲಿ ಶಿಬಿರ ಪ್ರಯೋಜನಕಾರಿಯಾಗಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಆರೋಗ್ಯ ಸಿರಿ ಯೋಜನೆಯಡಿ ಮಿಸ್ಟಿ ಹಿಲ್ಸ್ನ ೭೨ ಮಂದಿ ಸದಸ್ಯರು ಶಿಬಿರದ ಪ್ರಯೋಜನ ಪಡೆದಿದ್ದಾರೆ, ರಕ್ತದೊತ್ತಡ, ಮಧುಮೇಹ, ಇಸಿಜಿ, ಇಕೋ ಪರೀಕ್ಷೆಗಳನ್ನು ತಜ್ಞ ವೈದ್ಯರು ನಡೆಸಿದ್ದಾರೆ. ಮುಂದೆಯೂ ಸಾರ್ವಜನಿಕರಿಗಾಗಿ ಬೃಹತ್ ಆರೋಗ್ಯ ಮೇಳ ಆಯೋಜಿಸುವ ಚಿಂತನೆ ಇದೆ ಎಂದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ರೋಟರಿ ಮತ್ತು ಮಣಿಪಾಲ ಆಸ್ಪತ್ರೆ ಸಮೂಹ ಎರಡೂ ಕೂಡ ಉತ್ತಮ ಹೆಸರನ್ನು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಹೊಂದಿದೆ. ಪ್ರತಿಯೊಂದು ಸಂಘ ಸಂಸ್ಥೆಗಳಲ್ಲಿಯೂ ಆರೋಗ್ಯದ ಬಗ್ಗೆ ನಿಗಾ ವಹಿಸುವ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಪ್ರಮುಖರು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ವಲಯ ಸೇನಾನಿ ಎನ್.ಡಿ.ಅಚ್ಚಯ್ಯ, ಮಿಸ್ಟಿ ಹಿಲ್ಸ್ನ ಆರೋಗ್ಯ ತಪಾಸಣಾ ಶಿಬಿರ ಆಯೋಜನಾ ಸಮಿತಿ ಅಧ್ಯಕ್ಷ ಬಿ.ಜಿ. ಅನಂತಶಯನ, ಮಣಿಪಾಲ ಆಸ್ಪತ್ರೆಯ ಡಾ.ಬಿಪಿನ್, ಡಾ.ವಿನಯ್ ಕುಮಾರ್, ರತ್ನ, ಶ್ವೇತಾ, ಆಲ್ಬಿನ್, ನಂದಿನಿ, ಶಬರೀಷ್, ಕೆನಿತ್ ಹಾಜರಿದ್ದರು.