ಮಡಿಕೇರಿ, ಸೆ. ೮: ನಾಡಹಬ್ಬ ಮಡಿಕೇರಿ ದಸರಾ ಸಮೀಪಿಸುತ್ತಿದ್ದು, ಉತ್ಸವಕ್ಕಾಗಿ ಸಿದ್ಧತೆಗಳು ಕೂಡ ಭರದಿಂದ ಸಾಗಿದೆ. ಈ ನಡುವೆ
ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕವನ್ನು ಬಳಸುವಂತಿಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶ ಜಾರಿಯಾಗಿರುವುದು ಈ ಬಾರಿಯ ದಸರಾ ವೈಭವ ಕಳೆಗುಂದುವ ಆತಂಕವನ್ನು ಸೃಷ್ಟಿಮಾಡಿದೆ.
ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರಿ ದಸರಾ ಉತ್ಸವಕ್ಕೆ ಅದರದ್ದೇ ಆದ ಸೊಗಸು, ಗತ್ತು ಗಾಂಭೀರ್ಯವಿದೆ. ಕರಗ ದೇವತೆಗಳ ನಗರ ಪ್ರದಕ್ಷಿಣೆ, ಸುರಾಸುರರ ಕಾಳಗದ ಕಥಾ ಸಾರಾಂಶಗಳನ್ನು ಒಳಗೊಂಡು ದೇವಲೋಕವೇ ಧರೆಗಿಳಿದ ಮಾದರಿಯಲ್ಲಿ ತಯಾರಾಗುವ ದಶಮಂಟಪಗಳ ವೈಭವಯುತ ಶೋಭಾಯಾತ್ರೆ ಕಂಡು ತಲೆಬಾಗದವರೇ ಇಲ್ಲ. ವಿಜಯದಶಮಿಯ ದಿನದಂದು ಮಡಿಕೇರಿ ನಗರವ್ಯಾಪ್ತಿಯಲ್ಲಿ ಪ್ರತಿಯೊಂದು ಮಂಟಪಗಳಲ್ಲೂ ಕೂಡ ಡಿಜೆ ಧ್ವನಿವರ್ಧಕವನ್ನು ಅಳವಡಿಸಲಾಗುತ್ತದೆ. ಮಾತ್ರವಲ್ಲದೆ, ಗಾಂಧಿ ಮೈದಾನದ ಭವ್ಯ ವೇದಿಕೆಯಲ್ಲಿ ನಡೆಯುವ ನವರಾತ್ರಿ ಕಾರ್ಯಕ್ರಮಗಳಲ್ಲೂ ಭಾರೀ ಶಬ್ಧದ ಧ್ವನಿವರ್ಧಕ ಬಳಸಲ್ಪಡುತ್ತದೆ. ಇದು ಈ ಹಿಂದಿನಿAದಲೂ ನಡೆದು ಬಂದ ಸಂಪ್ರದಾಯ. ದಶಮಂಟಪಗಳು ಜನರೆದುರು ಪ್ರದರ್ಶಿಸುವ ದೈವಿಕ ಕಥಾ ಸಾರಾಂಶಗಳು, ಸಂಭಾಷಣೆ, ಹಿನ್ನೆಲೆ ಸಂಗೀತವನ್ನು ಒಳಗೊಂಡಿ ರುತ್ತದೆ. ಮಂಟಪಗಳ ತೀರ್ಪುಗಾರಿಕೆ ಸಂದರ್ಭ ಮಂಟಪಗಳು ಅಳವಡಿಸುವ ಧ್ವನಿವರ್ಧಕಗಳ ಗುಣ ಮಟ್ಟಕ್ಕೂ ಅಂಕಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಗಾಂಧಿ ಮೈದಾನ ದಂತಹ ಬೃಹತ್ ವೇದಿಕೆಯಲ್ಲಿ ಭಾರೀ ಶಬ್ಧದ ಧ್ವನಿವರ್ಧಕ ಬಳಸದಿದ್ದರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅಸಾಧ್ಯ. ವಾಸ್ತವ ಹೀಗಿರು ವಾಗ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿರುವ ಆದೇಶದಂತೆ ರಾತ್ರಿ ೧೦ ಗಂಟೆಯ ಬಳಿಕ ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲ ಎಂಬ ನಿಯಮವನ್ನು ಜಾರಿ ಮಾಡಲಾಗಿದೆ. ಗಣೇಶೋತ್ಸವ ಸಂಬAಧ ಈಗಾಗಲೇ ಜಿಲ್ಲೆಯಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ. ಇದೇ ನಿಯಮ ದಸರಾ ಉತ್ಸವಕ್ಕೂ ಅನ್ವಯವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಈಗಾಗಲೇ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿರುವುದು ದಸರಾ ಆಚರಣೆಗೆ ತಲೆನೋವಾಗಿ ಪರಿಣಮಿಸಿದೆ.
ಮಡಿಕೇರಿ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿದಿನ ರಾತ್ರಿ ೧೦ ಗಂಟೆ ಒಳಗಾಗಿ ಪೂರ್ಣಗೊಳಿಸಲು
(ಮೊದಲ ಪುಟದಿಂದ) ಸಾಧ್ಯವಿದೆಯೇ? ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ ೭.೩೦ರ ನಂತರವೇ ಆರಂಭವಾಗಲಿದ್ದು, ನಡುರಾತ್ರಿಯವರೆಗೂ ನಡೆಯುತ್ತವೆ. ವಿಜಯದಶಮಿಯಂದು ಸಂಜೆ ೭.೩೦ರಿಂದ ಮರುದಿನ ಮುಂಜಾನೆ ವರೆಗೂ ಇಡೀ ರಾತ್ರಿ ಕಾರ್ಯ ಕ್ರಮಗಳು ಮೂಡಿಬರಲಿದ್ದು, ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕ ಬಳಸಲು ಅವಕಾಶ ಸಿಗದಿದ್ದರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಾದರೂ ಹೇಗೆ? ಇನ್ನು ವಿಜಯದಶಮಿಯಂದು ದಶಮಂಟಪಗಳು ಶೋಭಾ ಯಾತ್ರೆಯನ್ನು ಆರಂಭಿಸುವುದೇ ರಾತ್ರಿ ೯ ಅಥವಾ ೧೦ ಗಂಟೆಯ ಬಳಿಕ. ಹೀಗಿರುವಾಗ ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕವನ್ನು ಬಳಸಬಾರದು ಎಂದು ಷರತ್ತು ವಿಧಿಸಿದರೆ ಶೋಭಾಯಾತ್ರೆ ಕಳೆಗಟ್ಟುವುದಾದರೂ ಹೇಗೆ?
ದಸರಾ ಉತ್ಸವ ದೈವಿಕ ಆಚರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ದಸರಾ ಎಂದ ಕೂಡಲೇ ಎಲ್ಲರ ಸ್ಮೃತಿಪಠಲದಲ್ಲಿ ಮೂಡುವುದು ಮಂಟಪಗಳ ಶೋಭಾಯಾತ್ರೆ. ಸಾಂಸ್ಕೃತಿಕ ಕಾರ್ಯಕ್ರಮ, ಅಬ್ಬರದ ಸಂಗೀತ, ಹಾಡು, ಕುಣಿತ... ಈ ಸಂತಸವನ್ನು ಅನುಭವಿಸುವುದಕ್ಕಾಗಿ ವಿವಿಧೆಡೆಗಳಿಂದ ಲಕ್ಷಾಂತರ ಮಂದಿ ಉತ್ಸವಕ್ಕೆ ಆಗಮಿಸುತ್ತಾರೆ. ಮೈಸೂರು ದಸರಾ ಮುಗಿದೊಡನೆ ಪ್ರವಾಸಿಗರು ಕೂಡ ಮಡಿಕೇರಿ ದಸರಾದತ್ತ ಬರುತ್ತಾರೆ. ಹಿಂದಿನಿAದಲೂ ನಡೆದು ಬಂದಿರುವ ಆಡಂಬರದ ದಸರಾ ಆಚರಣೆ ಎಲ್ಲೆಡೆ ಹೆಸರುವಾಸಿಯಾಗಿದೆ. ವಾರ್ಷಿಕವಾಗಿ ಒಮ್ಮೆ ನಡೆಯುವ ಈ ಉತ್ಸವವನ್ನು ಸಂಭ್ರಮಿಸುವ ತವಕದಲ್ಲಿ ನಾಡಿನ ಜನತೆ ಕಾಯುತ್ತಿದ್ದಾರೆ. ದಶಮಂಟಪಗಳು, ದಸರಾ ಸಮಿತಿ ಅಗತ್ಯ ತಯಾರಿಗಳನ್ನು ಕೈಗೊಳ್ಳುತ್ತಿದೆ. ಹೀಗಿರುವಾಗ ರಾತ್ರಿ ೧೦ ಗಂಟೆಯ ಬಳಿಕ ಧ್ವನಿವರ್ಧಕವನ್ನು ಬಳಸುವಂತಿಲ್ಲ ಎಂಬ ನಿಯಮ ದಸರಾ ಸಮಿತಿ, ದಶಮಂಟಪ ಸಮಿತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಾರ್ವಜನಿಕ ವಲಯದಲ್ಲೂ ನಿರಾಸೆಗೆ ಕಾರಣವಾಗುತ್ತಿದೆ.
ಎಸ್ಪಿ ಪ್ರತಿಕ್ರಿಯೆ
ದಸರಾ ಹಾಗೂ ಗಣಪತಿ ಉತ್ಸವ ಸಂಬAಧ ರಾತ್ರಿ ೧೦ ಗಂಟೆಯ ನಂತರ ಸಾರ್ವಜನಿಕ ಪ್ರದೇಶಗಳಲ್ಲಿ ಲೌಡ್ಸ್ಪೀಕರ್ ಅಥವಾ ಡಿಜೆಗಳನ್ನು ಹಾಕಬಾರದು ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದು, ಇದರ ಜೊತೆಗೆ ಸರ್ಕಾರದ ಶಬ್ಧ ಮಾಲಿನ್ಯ ಕಾಯ್ದೆ ಅನ್ವಯ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಸಾಂಪ್ರದಾಯಿಕವಾಗಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆಗಳಿಗೆ ಕಾನೂನಿನಡಿ ವಿನಾಯಿತಿ ನೀಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಆದೇಶ ಹೊರಡಿಸಿದರೆ ಅದರಂತೆ ಕ್ರಮ ಕೈಗೊಳ್ಳಲಾಗುತ್ತದೆ. ನ್ಯಾಯಾಲಯದ ಕಾನೂನು ಹಾಗೂ ಸರ್ಕಾರದ ಕಾಯ್ದೆ ಅನ್ವಯ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದ್ದು, ಅದರಲ್ಲಿ ಬದಲಾವಣೆ ತಂದರೆ ಬದಲಾವಣೆಗೆ ಅನುಗುಣವಾಗಿ ಇಲಾಖೆ ಕಾರ್ಯಪ್ರವೃತ್ತವಾಗಲಿದೆ ಎಂದು ಅಯ್ಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಒತ್ತಡ ಹೇರಬೇಕಿದೆ
ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ಆದರೆ ಐತಿಹಾಸಿಕ ಉತ್ಸವ ದಸರಾ ಸಂದರ್ಭದಲ್ಲಿ ನಿಯಮಗಳನ್ನು ಸಡಿಲಿಕೆ ಮಾಡಿಸುವ ಮೂಲಕ ಉತ್ಸವದ ಯಶಸ್ಸಿಗೆ ಪ್ರಯತ್ನಿಸಬೇಕಿದೆ. ಈಗಾಗಲೇ ಶಾಸಕ ಕೆ.ಜಿ. ಬೋಪಯ್ಯ ಅವರು ಸರ್ಕಾರಕ್ಕೆ ಪತ್ರ ಮುಖೇನ ಮನವಿ ಮಾಡಿದ್ದು, ಜಿಲ್ಲೆಯ ಉಳಿದ ಜನಪ್ರತಿನಿಧಿಗಳು ದಸರಾ ಸಮಿತಿ ಪ್ರಮುಖರು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕಿದೆ. ಇಲ್ಲವಾದರೆ ದಸರಾ ಉತ್ಸವ ತನ್ನ ಛಾಪನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
-ಉಜ್ವಲ್ ರಂಜಿತ್