ಕುಶಾಲನಗರ, ಸೆ. ೭: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ವಹಿವಾಟನ್ನು ಮುಂದಿನ ಸಾಲಿನಲ್ಲಿ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಗೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದರು. ಅವರು ಸಂಘದ ಮಹಾಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಸಂಘದ ವತಿಯಿಂದ ಈಗಾಗಲೇ ಸುಂಟಿಕೊಪ್ಪದಲ್ಲಿ ಶಾಖೆಯನ್ನು ತೆರೆದು ಸಾರ್ವಜನಿಕರಿಗೆ ಸೇವೆಯನ್ನು ನೀಡಲಾಗುತ್ತಿದೆ. ನೆರೆಯ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಕೇಂದ್ರ, ಬೈಲಕೊಪ್ಪ ಹಾಗು ಕೊಪ್ಪ ವ್ಯಾಪ್ತಿಗಳನ್ನು ಸೇರಿಸಿಕೊಂಡು ಮತ್ತೊಂದು ಶಾಖೆಯನ್ನು ತೆರೆಯಲು ಚಿಂತನೆ ನಡೆದಿದೆ ಎಂದು ಟಿ.ಆರ್. ಶರವಣಕುಮಾರ್ ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿಯಿಂದಾಗಿ ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದುದನ್ನು ಕಂಡು ಹಾವಳಿ ತಪ್ಪಿಸಲು ಈ ಸಂಘವನ್ನು ಆರಂಭಿಸಲಾಯಿತು. ಇದೀಗ ನಮ್ಮ ಸಂಘದ ಸೇವೆ ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ತಲುಪುತ್ತಿದೆ. ಈ ಮೂಲಕ ತಮ್ಮ ಕನಸು ನನಸಾಗಿರು ವುದಾಗಿ ಶರವಣಕುಮಾರ್ ಹೇಳಿದರು. ಕಳೆದ ೧೮ ವರ್ಷಗಳ ಹಿಂದೆ ಕೇವಲ ೩.೨೫ ಲಕ್ಷ ಬಂಡವಾಳ ದೊಂದಿಗೆ ಆರಂಭಿಸಿದ ಸಂಘ ಪ್ರಸಕ್ತ ಸಾಲಿನಲ್ಲಿ ೨೪೩ ಕೋಟಿ ರೂಗಳ ಹಣಕಾಸು ವಹಿವಾಟು ನಡೆಸಿದ್ದು, ಕಳೆದ ಸಾಲಿನಲ್ಲಿ ೧.೧೦ ಕೋಟಿ ರೂ ಲಾಭವನ್ನು ಗಳಿಸಲಾಗಿದೆ. ಈ ಲಾಭಾಂಶದಲ್ಲಿ ಸದಸ್ಯರಿಗೆ ಶೇ. ೧೮ ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಹೇಳಿದರು.

ಸಂಘದ ವತಿಯಿಂದ ಈ ಸಾಲಿನಲ್ಲಿ ಆಯ್ದ ಕೆಲವು ಬಡಾವಣೆಗಳಲ್ಲಿ ಪರಿಸರ ಸ್ನೇಹಿ ಗಿಡ ಮರಗಳನ್ನು ನೆಟ್ಟು ಬೆಳೆಸುವ ಯೋಜನೆ ಹೊಂದಿರುವ ಬಗ್ಗೆ ಶರವಣಕುಮಾರ್ ಹೇಳಿದರು.

ಇದೇ ಸಂದರ್ಭ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಎಂ.ಎA. ಶಾಹೀರ್, ನಿರ್ದೇಶಕರಾದ ಶಿವಪ್ರಕಾಶ್, ಬಿ.ರಾಮಕೃಷ್ಣಯ್ಯ, ಕೆ.ಎಸ್. ಮಹೇಶ್, ಎಂ.ವಿ. ನಾರಾಯಣ, ಜಗದೀಶ್, ಕೆ.ಪಿ. ಶರತ್, ಎಲ್. ನವೀನ್, ವಿ.ಸಿ. ಅಮೃತ್, ಕೆ. ಸುರೇಶಕುಮಾರ್, ಕವಿತಾ ಮೋಹನ್, ಟಿ.ಆರ್. ರೇಖಾ, ಆರ್.ಕೆ. ನಾಗೇಂದ್ರ, ಲೆಕ್ಕಪರಿಶೋಧಕ ಡಿ.ಎನ್. ಚಂದ್ರಶೇಖರ್, ಸಂಘದ ಕಾರ್ಯನಿರ್ವಹಣಾಧಿಕಾರಿ ಬಿ.ಡಿ. ಶ್ರೀಜೇಶ್, ವ್ಯವಸ್ಥಾಪಕ ರಾಜು, ಸಂಘದ ಸದಸ್ಯರು ಮತ್ತು ಸಿಬ್ಬಂದಿಗಳು ಇದ್ದರು.