ವೀರಾಜಪೇಟೆ, ಸೆ. ೭: ಭಾರತ ದೇಶದಲ್ಲಿ ಕಾರ್ಯನಿರ್ವಹಿಸುವ ಚಾಲಕರುಗಳು ಇತರ ದೇಶಗಳ ಚಾಲಕರಿಗಿಂತಲೂ ಶ್ರಮಜೀವಿಗಳು ಎಂದು ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಹೇಳಿದರು.

ಕೊಡಗು ಜಿಲ್ಲಾ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವವನ್ನು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಹೋರಾಟದ ಧ್ವನಿ ಒಂಟಿಯಾಗಿದ್ದಾಗ ಅದಕ್ಕೆ ಶಕ್ತಿಯಿರುವುದಿಲ್ಲ ಆದರೆ ಸಂಘಟನೆಯ ಮೂಲಕ ಒಟ್ಟುಗೂಡಿದ ಸಾಂಘಿಕ ಶಕ್ತಿಗೆ ಬಲ ಹೆಚ್ಚು. ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಲಾರಿ ಚಾಲಕರುಗಳಿಗೆ ಅಗತ್ಯ ಸೌಲಭ್ಯಗಳು ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಇದಕ್ಕೆಲ್ಲಾ ನೀತಿಗಳು ರಚನೆಯಾಗಬೇಕು ಎಂದು ಪೊನ್ನಣ್ಣ ಹೇಳಿದರು.

ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ, ಲಾರಿ ಚಾಲಕರು ಹಾಗೂ ಮಾಲೀಕರು ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಬೆಂಬಲ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ಮಸೂದ್ ಮೆಟ್ರೊ ಮಾತನಾಡಿ, ಲಾರಿ ಮಾಲೀಕರು ಹಾಗೂ ಚಾಲಕರು ಅನೇಕ ಕಷ್ಟಗಳನ್ನು ಎದುರಿಸುತ್ತಾ ಬಂದಿದ್ದೇವೆ. ನಮ್ಮ ಸಂಘ ಜಾತ್ಯಾತೀತವಾಗಿದೆ. ಸಂಘಟನೆ ವಿಚಾರ ಬಂದಾಗ ಜಾತಿ, ಧರ್ಮ, ರಾಜಕೀಯಕ್ಕೆ ಅವಕಾಶವಿಲ್ಲ. ನಮಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳನ್ನು ಒಗ್ಗಟ್ಟಿನ ಹೋರಾಟದ ಮೂಲಕ ಪಡೆದುಕೊಳ್ಳುತ್ತೇವೆ ಎಂದರು. ವೇದಿಕೆಯಲ್ಲಿ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಸಾಕ್ ಖಾನ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಸುಮನ್ ಕುಟ್ಟಪ್ಪ, ಬೋಪಣ್ಣ, ಪ್ರಧಾನ ಕಾರ್ಯದರ್ಶಿ ಸುಬ್ಬು, ಶಿಜು ಮೊದಲಾದವರು ಉಪಸ್ಥಿತರಿದ್ದರು.