ಚೆಟ್ಟಳ್ಳಿ, ಸೆ. ೭: ಮನೆಯಿಂದ ದಿಢೀರನೆ ಕಾಣೆಯಾಗಿದ್ದ ವೃದ್ಧೆಯೋರ್ವಳು ಎರಡು ದಿನಗಳು ಕಳೆದ ಬಳಿಕ ಮನೆಯ ಹಿಂಭಾಗದಲ್ಲಿ ಪ್ರತ್ಯಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸೀತಮ್ಮ (೮೮) ಎಂಬ ವೃದ್ಧೆ ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ ಮೇರೆಗೆ ಹಗಲು ರಾತ್ರಿ ಹುಡುಕಾಡಿದ ಪೊಲೀಸರು ಹಾಗೂ ಗ್ರಾಮಸ್ಥರಿಗೆ ಯಾವುದೇ ಸುಳಿವು ಸಿಗಲಿಲ್ಲ. ಎಫ್‌ಐಆರ್ ದಾಖಲಿಸಿದ ನಂತರ ಮಾರನೇ ದಿನ ಮನೆಯ ಪಕ್ಕದ ತೋಟದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ತಾ. ೪ರ ಮಧ್ಯಾಹ್ನ ಮೊಮ್ಮಗಳೊಂದಿಗೆ ಮಾತನಾಡುತ್ತಾ ಇದ್ದ ಸೀತಮ್ಮ ಬಿ.ಎಂ. ಇದ್ದಕ್ಕಿದ್ದ ಹಾಗೆ ಕಾಣೆಯಾಗಿದ್ದಾರೆ. ಮನೆಯ ಸುತ್ತಲೆಲ್ಲ ಹುಡುಕಾಡಿ ಪಕ್ಕದ ಮನೆಯವರಿಗೆ ಸಂಬAಧಿಕರಿಗೆ ತಿಳಿಸಿದರೂ ಅತ್ತೆಯ ಸುಳಿವು ಸಿಗಲಿಲ್ಲ. ರಾತೋರಾತ್ರಿಯೇ ಚೆಟ್ಟಳ್ಳಿ ಉಪಠಾಣೆಗೆ ಮಾಹಿತಿ ನೀಡಿದ ಮೇರೆಗೆ ಎಎಸ್‌ಐ ಶ್ರೀನಿವಾಸ್ ಸಿಬ್ಬಂದಿಯೊAದಿಗೆ ಮಧ್ಯರಾತ್ರಿ ಪಕ್ಕದ ತೋಟ, ನೆರೆಹೊರೆಯವರ ಮನೆ, ತೋಡು, ಕೆರೆಯ ಸುತ್ತೆಲ್ಲ ಹುಡುಕಾಡಿದ್ದಾರೆ.

ಮೊಮ್ಮಗಳು ಹರ್ಶಿಣಿಯ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತಾ. ೫ರಂದು ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಉಪ್ಪಳಗಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬೆಳಿಗ್ಗಿನಿಂದಲೇ ಪೊಲೀಸರು, ಗ್ರಾಮಸ್ಥರು ಸೇರಿ ಪಕ್ಕದಲ್ಲೆಡೆ ಹುಡುಕಾಡಿದರೂ ಸೀತಮ್ಮರ ಸುಳಿವಿರಲಿಲ್ಲ.

ತಾ. ೬ರ ಬೆಳಿಗ್ಗೆ ಸೀತಮ್ಮ ಮನೆಯ ಹಿಂಬದಿಯ ತೋಟದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಊಟವಿಲ್ಲದೆ ಮಳೆಯ ನಡುವೆ ಕಾಣೆಯಾಗಿದ್ದ ಸೀತಮ್ಮರಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ. -ಕಾಳಯ್ಯ