ವೀರಾಜಪೇಟೆ, ಸೆ. ೭: ಲೋಕಮಾನ್ಯ ಬಾಲ ಗಂಗಾಧರ ತಿಲಕರ ಪರಿಕಲ್ಪನೆಯ ಸಹಕಾರದಿಂದ ಇಂದು ವಿಶ್ವವ್ಯಾಪಿಯಾಗಿ ಸಾಮೂಹಿಕ ಗಣೇಶನ ಹಬ್ಬ ಆಚರಿಸಲಾಗುತ್ತಿದೆ ಎಂದು ನಿವೃತ್ತ ಸೇನಾಧಿಕಾರಿ ಜೇಮ್ಸ್ ಮೆನೆಜಸ್ಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ರಾಮನಗರ ಗ್ರಾಮದ ಪುದುಪಾಡಿ ಶ್ರೀ ಅಯ್ಯಪ್ಪ ದೇವಾಲಯದ ವತಿಯಿಂದ ಆಚರಿಸಲಾದ ೪೦ನೇ ವರ್ಷದ ಗಣೇಶೋತ್ಸವ ಅಂಗವಾಗಿ ದೇಗುಲದ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜನತೆಯನ್ನು ಸಂಘಟಿಸಲು ಗಣೇಶನ ಹಬ್ಬವನ್ನು ಅಚರಿಸಲಾಗುತ್ತಿದೆ.
ಸ್ವತಂತ್ರ ಪೂರ್ವದಲ್ಲಿ ಬ್ರಿಟೀಷರ ದಬ್ಬಾಳಿಕೆಯಿಂದಾಗಿ ಜನರು ಭಯದ ನೆರಳಿನಲ್ಲಿ ಜೀವನ ಕಳೆಯುವಂತಾಗಿತ್ತು. ಇದನ್ನು ಮನಗಂಡ ತಿಲಕರು ಮರೆತುಹೋಗಿದ್ದ ವಿನಾಯಕ ಚೌತಿಯನ್ನು ಬಹಿರಂಗವಾಗಿ ಆಚರಿಸಲು ನಿರ್ಧಾರ ಕೈಗೊಂಡರು. ಸಾರ್ವಜನಿಕರನ್ನು ಸಂಘಟಿಸಿದರು ಎಂದರು.
ಪುದುಪಾಡಿ ಅಯ್ಯಪ್ಪ ದೇವಾಲಯದ ಅಡಳಿತ ಮಂಡಳಿಯ ಅಧ್ಯಕ್ಷ ಡಾ. ರಾಮಕೃಷ್ಣ ಬೊರ್ಕಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೮೩ರಲ್ಲಿ ಆರಂಭವಾದ ವಿನಾಯಕ ಉತ್ಸವವು ಇಂದು ನಾಲ್ಕು ದಶಕಗಳು ಸಂದಿವೆ. ಉತ್ಸವ ಆಚರಣೆಯಲ್ಲಿ ದಾನಿಗಳ ಸಹಕಾರ ಸ್ಮರಿಸಬೇಕು ಎಂದರು.
ಗಣೇಶೋತ್ಸವ ಪ್ರಯುಕ್ತ ಏರ್ಪಡಿಸಲಾಗಿದ್ದ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹೆಗ್ಗಳ ವಿದ್ಯಾರ್ಥಿಗಳಿಂದ ರಂಗಗೀತೆ, ನಾಟಕ, ಸುಗ್ಗಿ ಕುಣಿತ, ತಿರುವಾದಿರ ಕಳಿ, ಕೋಲಾಟ, ಕಂಸಾಳೆ ಕುಣಿತ, ಭರತನಾಟ್ಯ ಕಲೆಗಳು ಮೂಡಿಬಂದವು. ಕಾರ್ಯಕ್ರಮದ ವೇದಿಕೆಯಲ್ಲಿ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಾಲಯದ ಉಪಾಧ್ಯಕ್ಷ ಬಿ.ಜಿ. ನಂದಾ ಭಟ್, ಕಾರ್ಯದರ್ಶಿ ಸುಮನಾ ಪ್ರವೀಣ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಹೆಗ್ಗಳ, ರಾಮನಗರ, ಬೂದಿಮಾಳ, ಕೊಟ್ಟೋಳಿ, ಆರ್ಜಿ, ತೋಮರ ಗ್ರಾಮದ ಗ್ರಾಮಸ್ಥರು, ಶಾಲಾ ವಿಧ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.