ವೀರಾಜಪೇಟೆ, ಸೆ. ೭: ಪಟ್ಟಣದ ಪುರಸಭೆ ವ್ಯಾಪ್ತಿಯ ಮೊಗರಗಲ್ಲಿ ಕೊಳಚೆ ಪ್ರದೇಶದಲ್ಲಿ ಒಳಚರಂಡಿ ಹಾಗೂ ಬೀದಿ ದೀಪಗಳ ಕೊರತೆ ಇದ್ದು, ಶೀಘ್ರದಲ್ಲಿಯೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪುರಸಭೆಯ ಮೊಗರಗಲ್ಲಿಯಲ್ಲಿ ರೂ. ೭೫ ಲಕ್ಷ ಅನುದಾನದ ಮಳೆ ನೀರಿನ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ರಸ್ತೆ ಮೇಲೆ ಹರಿದು ರಸ್ತೆಗಳು ಹಾಳಾಗುತ್ತಿವೆ. ಪುರಸಭೆಗೆ ಒದಗಿರುವ ಅನುದಾನದಲ್ಲಿ ಚರಂಡಿ ಹಾಗೂ ರಸ್ತೆಗಳನ್ನು ಸೂಕ್ತರೀತಿಯಲ್ಲಿ ನಿರ್ವಹಣೆ ಮಾಡಬೇಕು. ಸುಂಕದಕಟ್ಟೆ ಮತ್ತು ಹರಿಕೇರಿ ವಾರ್ಡ್ಗಳಿಗೆ ೪೫ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವುದರಿಂದ ವಿದ್ಯುತ್ ವೆಚ್ಚ ಕಡಿಮೆ ಆಗುತ್ತದೆ. ಲಭಿಸಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸರ್ಕಾರದ ಯಾವುದೇ ಕಾಮಗಾರಿ ನಡೆಯುವ ಸಂದರ್ಭ ಸ್ಥಳಿಯರು ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳುವುದು ಉತ್ತಮ. ಕಳಪೆ ಕಾಮಗಾರಿ ನಡೆಸದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಭೂಮಿ ಪೂಜೆ ಸಂದರ್ಭ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲ ಅಭಿಯಂತರ ಎಸ್. ತೇಜಶ್ರೀ, ಜವಹರ್ ಜೋಗಿ, ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮ್‌ಕುಮಾರ್, ಸದಸ್ಯರಾದ ಎಂ.ಕೆ. ದೇಚಮ್ಮ, ಎಸ್.ಹೆಚ್. ಮತೀನ್, ಡಿ.ಪಿ. ರಾಜೇಶ್, ರಜನಿಕಾಂತ್, ಸುನೀತಾ ಜೂನಾ, ತಸ್ನಿಂ ಅಕ್ತರ್, ಅನಿತಾ ಮತ್ತಿತರರು ಇದ್ದರು.