ಸಚಿವ ಉಮೇಶ್ ಕತ್ತಿ ವಿಧಿವಶ:ಹರಿದು ಬಂದ ಜನಸಾಗರ

ಬೆಳಗಾವಿ, ಸೆ. ೭: ಹೃದಯಾಘಾತದಿಂದ ನಿಧನರಾದ ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಹೊರವಲಯದಲ್ಲಿರುವ ವಿಶ್ವರಾಜ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಉಮೇಶ ಕತ್ತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ. ಕತ್ತಿ (೬೨) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಅವರು ಅಲ್ಲಿಯೇ ಕುಸಿದುಬಿದ್ದಿದ್ದರು. ಹತ್ತು ನಿಮಿಷಗಳಾದರೂ ಹೊರ ಬರದಿದ್ದಾಗ ಕುಟುಂಬದವರು ಬಾಗಿಲು ತೆರೆದು ಒಳ ಹೋದಾಗ ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬAದಿತ್ತು. ಬಳಿಕ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ತಡರಾತ್ರಿ ವೇಳೆಗೆ ಉಮೇಶ ಕತ್ತಿ ಕೊನೆಯುಸಿರೆಳೆದರು.

ಕಾಂಗ್ರೆಸ್ ‘ಭಾರತ್ ಜೋಡೋ' ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ

ಚೆನ್ನೆöÊ, ಸೆ. ೭: ೨೦೨೪ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಪಕ್ಷದ ಬೃಹತ್ ಜನಸಂಪರ್ಕ ಕಾರ್ಯಕ್ರಮ ‘ಭಾರತ್ ಜೋಡೋ ಯಾತ್ರೆ'ಗೆ ಇಂದು ಕನ್ಯಾಕುಮಾರಿಯಿಂದ ಚಾಲನೆ ನೀಡಿದರು. ೧೫೦ ದಿನಗಳಲ್ಲಿ ೩,೫೦೦ ಕಿ.ಮೀ. ದೂರ ಪಾದಯಾತ್ರೆ ಸಾಗಲಿದೆ. ಮೇ ೨೧, ೧೯೯೧ ರಂದು ಆತ್ಮಾಹುತಿ ದಾಳಿಯಲ್ಲಿ ಸಾವನ್ನಪ್ಪಿದ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ತಮ್ಮ ದಿನವನ್ನು ಪ್ರಾರಂಭಿಸಿದರು. ತಮ್ಮ ತಂದೆಯ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ದ್ವೇಷ ಮತ್ತು ವಿಭಜನೆಯ ರಾಜಕೀಯದಿಂದ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಆದರೆ ಇದಕ್ಕಾಗಿ ನಾನು ನನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವುದಿಲ್ಲ. ಪ್ರೀತಿ ದ್ವೇಷವನ್ನು ಜಯಿಸುತ್ತದೆ, ಭರವಸೆಯು ಭಯವನ್ನು ಸೋಲಿಸುತ್ತದೆ, ನಾವು ಒಟ್ಟಾಗಿ ಜಯಿಸುತ್ತೇವೆ ಎಂದು ಹೇಳಿದರು. ಬಿಜೆಪಿ ಆಡಳಿತದ ಅಡಿಯಲ್ಲಿ ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಕೇಂದ್ರೀಕರಣವನ್ನು ಆರೋಪಿಸಿದ ರಾಹುಲ್ ಗಾಂಧಿ, 'ಭಾರತ್ ಜೋಡೋ ಯಾತ್ರೆ' ದೇಶವನ್ನು ಒಗ್ಗೂಡಿಸಲು ತನಗೆ ತಪಸ್ಸು ಇದ್ದಂತೆ ಎಂದು ಈ ಹಿಂದೆ ಹೇಳಿದ್ದರು. ೨೦೨೪ ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಬೃಹತ್ ಸಾಮೂಹಿಕ ಸಂಪರ್ಕ ಕಾರ್ಯಕ್ರಮವಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ಯೋಜಿಸಿದೆ. ಆದಾಗ್ಯೂ, ಕಾಂಗ್ರೆಸ್ ನಾಯಕರು ಯಾವುದೇ ರಾಜಕೀಯ ದೃಷ್ಟಿಕೋನವನ್ನು ನಿರಾಕರಿಸಿದರು. ಮತ್ತು ಯಾತ್ರೆಯು ದೇಶವನ್ನು ಒಂದುಗೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ. ಸಂಜೆ ಕನ್ಯಾಕುಮಾರಿಯ ಮಹಾತ್ಮಗಾಂಧಿ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ರಾಹುಲ್ ಗಾಂಧಿಗೆ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಯಾತ್ರೆಯ ಉದ್ಘಾಟನೆಯಲ್ಲಿ ರಾಷ್ಟçಧ್ವಜವನ್ನು ಹಸ್ತಾಂತರಿಸಲಿದ್ದಾರೆ. ೩,೫೦೦ ಕಿಲೋಮೀಟರ್ ಉದ್ದದ ಯಾತ್ರೆಯನ್ನು ಕಾಂಗ್ರೆಸ್ ಕಳೆದ ಶತಮಾನದಲ್ಲಿ ಆಯೋಜಿಸಿದ್ದ ಅತಿ ಉದ್ದದ ಪಾದಯಾತ್ರೆ ಎಂದು ಹೆಸರಿಸಿದೆ. ಗುರುವಾರ ಬೆಳಗ್ಗೆ ಪಾದಯಾತ್ರೆಯೊಂದಿಗೆ ಭಾರತ್ ಜೋಡೋ ಯಾತ್ರೆ ಪಾದಯಾತ್ರೆ ಆರಂಭವಾಗಲಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿದಿನ ಬೆಳಿಗ್ಗೆ ೭ ರಿಂದ ಸಂಜೆ ೬.೩೦ ರವರೆಗೆ ಎರಡು ಬ್ಯಾಚ್‌ಗಳಲ್ಲಿ ಪಾದಯಾತ್ರೆ ಮಾಡಲಿದ್ದಾರೆ.

ಬಿ.ಎಸ್. ಯಡಿಯೂರಪ್ಪಗೆ ಸಂಕಷ್ಟ

ಬೆAಗಳೂರು, ಸೆ. ೭: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣದ ಮರು ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ೨೦೨೧ರ ಜುಲೈ ೮ ರಂದು ವಿಶೇಷ ನ್ಯಾಯಾಲಯವು ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರು ಈ ಆದೇಶವನ್ನು ನೀಡಿದ್ದಾರೆ. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಹಾಗೂ ಅವರ ಕುಟುಂಬದ ಕೆಲ ಸದಸ್ಯರು ಹಾಗೂ ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ ಒಂಭತ್ತು ಜನರ ವಿರುದ್ಧದ ಅಪರಾಧಗಳ ವಿಚಾರಣೆಗೆ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಯೋಜನೆ ನೀಡಲು ರಾಮಲಿಂಗA ಕನ್‌ಸ್ಟçಕ್ಷನ್ ಕಂಪೆನಿ ಪ್ರೆöÊವೇಟ್ ಲಿಮಿಟೆಡ್‌ನಿಂದ ೧೨.೫ ಕೋಟಿ ರೂಪಾಯಿ ಲಂಚ ಪಡೆದ ಆರೋಪದ ಕುರಿತು ತನಿಖೆಗೆ ಆದೇಶಿಸುವಂತೆ ಅಬ್ರಹಾಂ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಪೂರ್ವಾನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಹೀಗಾಗಿ ಟಿಜೆ ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.

ವೃತ್ತಿಪರ ಕೋರ್ಸುಗಳಿಗೆ ಕೌನ್ಸೆಲಿಂಗ್:ಅಶ್ವತ್ಥ ನಾರಾಯಣ

ಬೆಂಗಳೂರು, ಸೆ. ೭: ಇಂಜಿನಿಯರಿAಗ್ ಶಿಕ್ಷಣಕ್ಕೆ ಪ್ರವೇಶಾತಿ ಕಲ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕಾಮೆಡ್-ಕೆ ಯಾವಾಗ ಕೌನ್ಸೆಲಿಂಗ್ ಪ್ರಾರಂಭಿಸಬೇಕು ಎನ್ನುವುದನ್ನು ನಿರ್ಧರಿಸಲು ಖಾಸಗಿ ಅನುದಾನರಹಿತ ಇಂಜಿನಿಯರಿAಗ್ ಕಾಲೇಜುಗಳ ಸಂಘದ (ಕ್ಯುಪೇಕಾ) ಜತೆ ತಾ. ೧೩ ರಂದು ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ. ಕ್ಯುಪೇಕಾ ಪ್ರತಿನಿಧಿಗಳ ಜತೆ ಇಂದು ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಅವರು ಈ ವಿಚಾರ ತಿಳಿಸಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕಾಮೆಡ್-ಕೆ ಪರಸ್ಪರ ಸಮಾಲೋಚಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ರೂಪಿಸಲಿವೆ ಎಂದು ಅವರು ಹೇಳಿದ್ದಾರೆ. ಸಭೆಯಲ್ಲಿ ಸರಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ, ಕ್ಯುಪೇಕಾ ಪರವಾಗಿ ಎಂ.ಆರ್. ಜಯರಾಂ, ಶಾಮ್ ಮತ್ತು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಘದ ಅಧ್ಯಕ್ಷ ಶಫಿ ಅಹಮದ್ ಉಪಸ್ಥಿತರಿದ್ದರು.

ಸ್ಮಶಾನಕ್ಕಾಗಿ ನೀಡಿರುವ ೧,೧೪೧ ಜಾಗಗಳು ಒತ್ತುವರಿ

ಬೆಂಗಳೂರು, ಸೆ. ೭: ಸ್ಮಶಾನಕ್ಕಾಗಿ ನೀಡಿರುವ ೧,೧೪೧ ಜಾಗಗಳು ಒತ್ತುವರಿಯಾಗಿದೆ ಎಂದು ರಾಜ್ಯ ಸರ್ಕಾರ ಬುಧವಾರ ಕರ್ನಾಟಕ ಹೈಕೋರ್ಟ್ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪಾಲನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ಬೆಂಗಳೂರಿನ ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ಕೆ.ಎಸ್. ಹೇಮಲೇಖ ಅವರಿದ್ದ ವಿಭಾಗೀಯ ನಡೆಸಿತು. ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಸಲ್ಲಿಸಿದ ಅನುಪಾಲನಾ ವರದಿಯನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ರಾಜ್ಯದಲ್ಲಿ ಒತ್ತುವರಿಯಾಗಿರುವ ಸ್ಮಶಾನ ಜಾಗಗಳನ್ನು ತೆರವುಗೊಳಿಸಬೇಕು ಮತ್ತು ಶವಸಂಸ್ಕಾರ ಸ್ಥಳಾವಕಾಶ ಇಲ್ಲದ ಗ್ರಾಮಗಳಿಗೆ ಸ್ಮಶಾನ ಮಂಜೂರು ಮಾಡಲು ಮೂರು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ಆಗಸ್ಟ್ ೧೬ ರಂದು ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ಸರ್ಕಾರ ಸೆಪ್ಟೆಂಬರ್ ೫ರಂದು ಅನುಪಾಲನಾ ವರದಿ ಸಲ್ಲಿಸಿದೆ. ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಶೇ.೯೨ರಷ್ಟು ಸ್ಮಶಾನ ಜಾಗಗಳನ್ನು ಮಂಜೂರು ಮಾಡಲಾಗಿದ್ದು, ಕಾನೂನು ತೊಡಕುಗಳ ಕೆಲ ಕಾರಣಗಳಿಂದಾಗಿ ಒಂದಿಷ್ಟು ಕಡೆ ಸ್ಮಶಾನ ಜಾಗ ಮಂಜೂರು ಮಾಡಲು ವಿಳಂಬವಾಗಿದೆ. ಸ್ಮಶಾನ ಜಾಗಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು ಮತ್ತು ಶವ ಸಂಸ್ಕಾರಕ್ಕೆ ಅಗತ್ಯ ಜಮೀನು ಇಲ್ಲದ ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಮಂಜೂರು ಮಾಡಬೇಕು ಎಂಬ ನ್ಯಾಯಾಲಯದ ಆದೇಶ ಪಾಲನೆಗೆ ಮೂರು ವಾರ ಕಾಲಾವಕಾಶ ಬೇಕು ಎಂದು ಕೋರಿದರು. ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಮುಂದೂಡಿತು.