ಮಡಿಕೇರಿ, ಸೆ. ೭: ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಇಂದು ಅಧ್ಯಯನ ಕೇಂದ್ರ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಐಎಎಸ್ ಅಧಿಕಾರಿ ಆಶಿಕ್ ಕುಮಾರ್ ನೇತೃತ್ವದ ತಂಡದವರು ಮಡಿಕೇರಿ ತಾಲೂಕಿನ ಸೀಮೆಹುಲ್ಲುಕಜೆ ಬಳಿ ಉಂಟಾಗಿರುವ ಭೂಕುಸಿತ, ಕಾಫಿ ಬೆಳೆಹಾನಿ, ಮದೆನಾಡು ಬಳಿಯ ಕರ್ತೋಜಿ ಹೆದ್ದಾರಿ ಭೂಕುಸಿತ ಪ್ರದೇಶ, ಕೊಯನಾಡು ಶಾಲೆ ಬಳಿ ಭೂಕುಸಿತ ಹಾಗೂ ಕಿಂಡಿ ಅಣೆಕಟ್ಟು ಪ್ರದೇಶವನ್ನು ವೀಕ್ಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಎಸ್ಡಿಎಂಎ ರಾಜ್ಯ ಅಧಿಕಾರಿ ಡಾ. ಮನೋಜ್ ರಾಜನ್ ಅವರು, ಕಳೆದ ೫ ವರ್ಷಗಳಿಂದ ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗಗಳಲ್ಲಿ ಅಕಾಲಿಕ ಮಳೆ, ಅತಿವೃಷ್ಟಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸುತ್ತಿವೆ. ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಅತಿಯಾದ ಮಳೆಯಿಂದಾಗಿ ಕಾಫಿ ಕೃಷಿ, ಜನವಸತಿ ಪ್ರದೇಶಗಳಿಗೆ ಸಾಕಷ್ಟು ಹಾನಿಯಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಸಕಾಲದಲ್ಲಿ ಸ್ಪಂದಿಸುತ್ತಿದ್ದು, ಪಾರದರ್ಶಕವಾಗಿ ಪರಿಹಾರೋಪಾಯ ಕಾರ್ಯಗಳು ಸಾಗುತ್ತಿವೆ. ಭೂಕುಸಿತ, ಭೂಕಂಪನಗಳಿಗೆ ಕಾರಣ ಕಂಡು ಹಿಡಿಯಲು ಅಧ್ಯಯನಗಳು ಆಗುತ್ತಿವೆ. ಅಮೃತ ಯೂನಿವರ್ಸಿಟಿಯಲ್ಲಿಯೂ ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ೫೦ ವರ್ಷಗಳ ಬಳಿಕ ಈ ಬಾರಿ ಕಂಡು ಕೇಳರಿಯದಷ್ಟು ಮಳೆಯಾಗಿದೆ. ಮುಖ್ಯಮಂತ್ರಿಗಳ ಆದೇಶದಂತೆ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಪರಿಶೀಲನಾ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸರಕಾರಕ್ಕೆ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು. ತಂಡದಲ್ಲಿ ಹಣಕಾಸು ಸಚಿವಾಲಯದ ಉಪ ನಿರ್ದೇಶಕ ಮಹೇಶ್ ಕುಮಾರ್, ಇಂಧನ ಸಚಿವಾಲಯದ ಸಹಾಯಕ ನಿರ್ದೇಶಕಿ ಭವ್ಯ ಪಾಂಡೆ ಇದ್ದರು. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿ. ಪಂ. ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುAಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಮಹೇಶ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಸ್ಥಳದಲ್ಲಿ ಹಾಜರಿದ್ದು, ಮಾಹಿತಿ ಒದಗಿಸಿದರು.