ಶಾಸಕ ಅಪ್ಪಚ್ಚು ರಂಜನ್

ಕುಶಾಲನಗರ, ಸೆ. ೭: ಕುಶಾಲನಗರ ಸರ್ಕಾರಿ ಆಸ್ಪತ್ರೆಯನ್ನು ೧೦೦ ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಚಿಂತನೆ ಹರಿಸಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಚರ್ಚೆಯ ನಂತರ ಮಾತನಾಡಿ, ಕುಶಾಲನಗರದ ಸರ್ವೆ ನಂ. ೬೮ ರ ೪ ಎಕರೆ ಜಾಗದಲ್ಲಿ ತಾಲೂಕುಮಟ್ಟದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿಸಿದರು. ಈ ಆವರಣದಲ್ಲಿ ವೈದ್ಯರು-ಸಿಬ್ಬಂದಿಗಳಿಗೆ ವಸತಿ ಗೃಹ ಮತ್ತಿತರ ಸೌಲಭ್ಯಗಳು ಲಭ್ಯವಾಗಲಿದೆ. ಸೋಮವಾರಪೇಟೆಯಲ್ಲಿ ೨೫ ಬೆಡ್‌ಗಳ ತೀವ್ರ ನಿಗಾಘಟಕ ನಿರ್ಮಾಣ ವಾಗಲಿದೆ. ಕುಶಾಲನಗರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುವ ಕಾರಣ ೩೦ ಬೆಡ್‌ಗಳ ಐಸಿಯು ವಿಭಾಗ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.

ಈಗಾಗಲೇ ರಕ್ಷಾ ಸಮಿತಿಯಿಂದ ರೂ. ೨೦ ಲಕ್ಷ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ರೂ. ೧೦ ಲಕ್ಷ ಅನುದಾನದೊಂದಿಗೆ ಪ್ರಸಕ್ತ ಆಸ್ಪತ್ರೆಗೆ ಡಿಜಿಟಲ್‌ಎಕ್ಸ್ರೆ ಸೇರಿದಂತೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಕುಶಾಲನಗರದಲ್ಲಿ ತಾಲೂಕುಮಟ್ಟದ ಆಸ್ಪತ್ರೆ ನಿರ್ಮಾಣಗೊಂಡಲ್ಲಿ ಪ್ರಸಕ್ತ ಇರುವ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಲಿದೆ ಎಂದರು. ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳು ಕುಶಾಲನಗರ ಆಸ್ಪತ್ರೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಸಭೆಯ ಗಮನಕ್ಕೆ ತಂದರು. ಹೆಚ್ಚಿನ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು, ಆಸ್ಪತ್ರೆಯ ಆ್ಯಂಬುಲೆನ್ಸ್ ವಾಹನ ಚಾಲಕ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದು, ಆಸ್ಪತ್ರೆಯಿಂದ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಔಷಧಿ ಚೀಟಿ ನೀಡುವುದು, ಪ್ರಯೋಗಾಲಯ ಮತ್ತು ಇತರೆಡೆ ಸ್ವಚ್ಛತೆಯ ಕೊರತೆ ಬಗ್ಗೆ ಚರ್ಚೆ ನಡೆಯಿತು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಧುಸೂದನ್, ರಕ್ಷಾ ಸಮಿತಿಯ ಸಾಮಾನ್ಯ ಸಭೆಯ ಅನುಪಾಲನ ವರದಿ ಮಂಡಿಸಿದರು. ಇದೇ ಸಂದರ್ಭ ಸಮಿತಿಯ ಲೆಕ್ಕಪತ್ರ ಸಭೆಯಲ್ಲಿ ಮಂಡಿಸಲಾಯಿತು.

ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಮಾತನಾಡಿ, ಪಂಚಾಯಿತಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನಿಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ವಿ. ಜಯಣ್ಣ, ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್, ನಾಮ ನಿರ್ದೇಶಿತ ಸದಸ್ಯರುಗಳಾದ ಡಾಟಿ, ಉತ್ತಪ್ಪ, ಪ್ರವೀಣ್, ಗೌತಮ್, ಪ್ರಭಾಕರ್, ಕುಮಾರಸ್ವಾಮಿ ಮತ್ತು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಇದ್ದರು.