ಕುಶಾಲನಗರ, ಸೆ. ೫: ಸಮಾಜದಲ್ಲಿ ಅಸ್ಪೃಶ್ಯರಂತೆ ಕಾಣುತ್ತಿದ್ದ ಸಮುದಾಯವನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಿದ ಶೇಷ್ಠ ಸಂತ ಬ್ರಹ್ಮ ಶ್ರೀ ನಾರಾಯಣ ಗುರು ಎಂದು ಜಿಲ್ಲಾ ಶ್ರೀನಾರಾಯಣ ಧರ್ಮ ಪರಿಪಾಲನ ಸಮಿತಿ ಅಧ್ಯಕ್ಷ ವಿ.ಕೆ. ಲೋಕೇಶ್ ಹೇಳಿದರು

ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘದ ವತಿಯಿಂದ ಕುಶಾಲನಗರ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ನಾರಾಯಣ ಗುರು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದಿರುವ ಸಮುದಾಯ ದವರು ದುಶ್ಚಟದಿಂದ ದೂರ ಇರಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ಭವಿಷ್ಯ ರೂಪಿಸುವತ್ತ ಚಿಂತನೆ ಹರಿಸಬೇಕು ಎಂದರು. ಬಾಳೆಲೆ ವಿಜಯಲಕ್ಷಿö್ಮ ಪಿಯು ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ಸಮಾಜದಲ್ಲಿನ ಮೌಢ್ಯ, ಅಂಧಕಾರ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಏಕಾಂಗಿ ಹೋರಾಟ ನಡೆಸಿದ ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು ಎಂದು ಬಣ್ಣಿಸಿದರು.

ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಬೆಳ್ಳಿಯಪ್ಪ ಮಾತನಾಡಿ, ಶ್ರೀ ನಾರಾಯಣಗುರು, ಮಹಾತ್ಮ ಅಯ್ಯನ್ ಕಾಳಿ ಅವರು ಜನರಲ್ಲಿ ಜಾಗೃತಿ ಮೂಡಿಸಿ ಸಮಾನತೆ ಹಾದಿಗೆ ತರಲು ಪ್ರಯತ್ನ ಮಾಡುತ್ತಿದ್ದರು. ಇಂತಹ ನಾಯಕರಿಂದ ಇದೀಗ ಸಮಾಜದಲ್ಲಿ ಸಮಾನತೆ, ಏಕತೆ ಹಾಗೂ ಸಹೋದರತ್ವ ಕಾಣುತ್ತಿದ್ದೇವೆ ಎಂದರು.

ಎಸ್ಸಿ, ಎಸ್ಟಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಹಾಬೋಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಸತೀಶ್, ಡಾ. ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಎಸ್.ಜೆ. ಸತೀಶ್, ದಸಂಸದ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ, ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಜಿಲ್ಲಾ ಸಂಚಾಲಕಿ ಗಾಯಿತ್ರಿ ನರಸಿಂಹ, ಮುಖಂಡರಾದ ಎಂ.ಎಸ್. ವಿರೇಂದ್ರ, ಪರಶುರಾಮ, ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ಆದಿದ್ರಾವಿಡ ಸಮಾಜದ ಎಚ್.ಎಂ. ಸೋಮಪ್ಪ, ಎಸ್ಸಿ, ಎಸ್ಟಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಬಿ.ಸಿ. ರಾಜು, ಖಜಾಂಚಿ ನಿಂಗರಾಜು, ನಿರ್ದೇಶಕ ರಾಮಚಂದ್ರ, ಎಚ್.ಆರ್. ನಾಗೇಶ್, ಬೇಲಯ್ಯ ಇತರರು ಇದ್ದರು.