(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಸೆ.೬: ಕೊಡಗಿನಲ್ಲಿ ದಿನದಿಂದ ದಿನಕ್ಕೆ ಅದರಲ್ಲೂ ವಿಶೇಷವಾಗಿ ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ ಕುರ್ಚಿ, ಬೀರುಗ, ಮಂಚಳ್ಳಿ, ತೈಲ, ಕುಮಟೂರು, ನೆಮ್ಮಲೆ, ಕುಟ್ಟ, ಶ್ರೀಮಂಗಲ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ರೈತರು ಕಾಡಾನೆಗಳ ಉಪಟಳದಿಂದ ಹೈರಾಣಾಗಿದ್ದಾರೆ.

ಈ ಹಿಂದೆ ಬೆರಳಣಿಕೆಯ ಕಾಡಾನೆಗಳು ಈ ಭಾಗದ ರೈತರ ಕಾಫಿ, ತೋಟದಲ್ಲಿ ಭತ್ತದ ಗದ್ದೆಗಳಲ್ಲಿ ಕಾಣಿಸಿಕೊಂಡು ನಂತರ ಮರೆಯಾಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಇದಕ್ಕೆ ತದ್ವಿರುದ್ಧವಾಗಿ ಕಾಡಾನೆಗಳ ಹಿಂಡು ರೈತರ ತೋಟದಲ್ಲಿಯೇ ನೆಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಡಾನೆಗಳ ಉಪಟಳದಿಂದ ಬೇಸತ್ತ ರೈತರು ಆಗೊಮ್ಮೆ ಈಗೊಮ್ಮೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕುವ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಭರವಸೆ ನೀಡಿ, ನಂತರ ಕೆಲವು ಆನೆಗಳನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಿ ಇನ್ನೇನು ಅರಣ್ಯದತ್ತ ತೆರಳುವ ವೇಳೆ ಕತ್ತಲಾಗುತ್ತಿದ್ದಂತೆಯೇ ತಮ್ಮ ಕಾರ್ಯಾಚರಣೆ ಕೈ ಬಿಡುತ್ತಾರೆ.

ಕಾಡಾನೆಗಳ ಉಪಟಳ ತಪ್ಪಿಸಲು ಹಾಗೂ ಅರಣ್ಯ ಪ್ರದೇಶದಿಂದ ಕಾಡಾನೆಗಳು ರೈತರ ತೋಟಗಳಿಗೆ ತೆರಳದಂತೆ ಇಲ್ಲಿಯತನಕ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕಾದ ಇಲಾಖೆ ಮೌನಕ್ಕೆ ಶರಣಾಗಿರುವುದು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನುಭವಿ ನೌಕರರು ನಿಗದಿತ ಸಮಯದಲ್ಲಿ ವೇತನ ಸಿಗದ ಕಾರಣ ತಮ್ಮ ಕೆಲಸಕ್ಕೆ ವಿದಾಯ ಹೇಳಿ ತೆರಳಿದ್ದಾರೆ. ಇವರ ಬದಲಿಗೆ ಬಂದ ತಾತ್ಕಾಲಿಕ ನೌಕರರು ಆನೆ ಓಡಿಸಲು ಪರಿಣಿತರಾಗಿಲ್ಲ. ಮಂಚಳ್ಳಿ , ಕುರ್ಚಿ, ಬೀರುಗ ಭಾಗದ ಆನೆಗಳನ್ನು ತೈಲ, ಪನ್ಯ, ನಾಣಚ್ಚಿ ಬೊಳ್ಳೇರ ಗೇಟ್ ಮೂಲಕ ನಾಗರಹೊಳೆ ಅಭಯಾರಣ್ಯಕ್ಕೆ ಓಡಿಸಲು ನಾಗರಹೊಳೆ ಹಾಗೂ ತಿತಿಮತಿಯ ನುರಿತ ಆದಿವಾಸಿ ಜನರಿಂದ ಮಾತ್ರ ಸಾಧ್ಯವಾಗಲಿದೆ.

ಶ್ರೀಮಂಗಲ ಭಾಗದಲ್ಲಿ ಬೀಡುಬಿಟ್ಟಿರುವ ಆನೆಗಳು ನಾಗರಹೊಳೆ ವಯನಾಡ್ ಅರಣ್ಯ ವ್ಯಾಪ್ತಿಗೆ ಸೇರಿದ ಕೆಲವು ಆನೆಗಳಾಗಿವೆ ಎಂಬುದು ಸಾರ್ವಜನಿಕ ಅಭಿಪ್ರಾಯ. ಆನೆಗಳನ್ನು ಒಡಿಸಲು ಅರಣ್ಯ ಇಲಾಖೆಯು ರೈತರ ಸಹಕಾರ ಪಡೆಯಬೇಕಾಗಿದೆ. ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳ ನಿರ್ಲಕ್ಷö್ಯ ಹಿನ್ನೆಲೆಯಲ್ಲಿ ಹಲವು ಆನೆಗಳು ವಿವಿಧ ಕಾರಣದಿಂದ ಸಾವನ್ನಪ್ಪಿದೆ ಎಂಬುದು ಗ್ರಾಮಸ್ಥರಿಂದ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೆ, ರೈತರ, ಕಾರ್ಮಿಕರ ಪ್ರಾಣಕ್ಕೂ ಕುತ್ತು ಬಂದಿವೆ. ಅಮಾಯಕ ಜೀವ ಬಲಿಯಾಗಿವೆ.

ಹಲವು ಅಂಗ ವೈಕಲ್ಯ ಅನುಭವಿಸುತ್ತಿದ್ದಾರೆ. ದಿನಂಪ್ರತಿ ರೈತರು ತಾವು ಬೆಳೆದ ಬೆಳೆಗಳನ್ನು ಕಾಡಾನೆಗಳಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಕಷ್ಟವಾಗಿ ಪರಿಣಮಿಸಿದೆ. ಅರಣ್ಯ ಇಲಾಖೆಯ ಅವೈಜ್ಞಾನಿಕ ಪರಿಹಾರಕ್ಕೆ ದಿನಂಪ್ರತಿ ಅರ್ಜಿ ನೀಡುವ ಪ್ರಸಂಗ ಮಾಮೂಲಿಯಾಗಿವೆ. ಅರಣ್ಯ ಇಲಾಖೆ ನೀಡುತ್ತಿರುವ ಅವೈಜ್ಞಾನಿಕ ರೀತಿಯ ಪರಿಹಾರ ಏನೇನೂ ಸಾಲದಾಗಿದೆ.

ಕಾಡು ಸೇರಿದ ಹ್ಯಾಂಗಿAಗ್ ಸೋಲಾರ್ ಫೆನ್ಸ್..!

ಈ ಭಾಗದಲ್ಲಿ ಕಾಡಾನೆಗಳ ಉಪಟಳದಿಂದ ರೈತರು ಬಸವಳಿಯುತ್ತಿರುವ ಹಿನ್ನೆಲೆಯಲ್ಲಿ ಆಗಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಭಾಗದ ಅರಣ್ಯ ಪ್ರದೇಶಕ್ಕೆ ಖುದ್ದಾಗಿ ತೆರಳಿ ಕಾಡಾನೆಗಳ ಉಪಟಳ ತಡೆಯಲು ಹ್ಯಾಂಗಿAಗ್ ಸೋಲಾರ್ ಫೆನ್ಸ್ ಅಳವಡಿಸಲು ನಿರ್ದೇಶನ ನೀಡಿದ್ದರು. ತದನಂತರ ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸರ್ಕಾರದ ವತಿಯಿಂದ ೫೦ ಲಕ್ಷ ಅನುದಾನ ವನ್ನು ಬಿಡುಗಡೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಂತರ ಈ ಅನುದಾನದಲ್ಲಿ ಅರಣ್ಯ ಇಲಾಖೆಯು ಕಾಡಾನೆಗಳು ಅರಣ್ಯದಿಂದ ಇಳಿಯುವ ಪ್ರದೇಶದಲ್ಲಿ ಹ್ಯಾಂಗಿAಗ್ ಸೋಲಾರ್ ಫೆನ್ಸ್ ಅಳವಡಿಸಿದ್ದರು. ಇದರಿಂದ ಕಾಡಾನೆಗಳು ಅರಣ್ಯ ಪ್ರದೇಶದಿಂದ ನಾಡಿನತ್ತ ಬರುವುದನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಈ ಹ್ಯಾಂಗಿAಗ್ ಸೋಲಾರ್ ಫೆನ್ಸ್ಗಳ ನಿರ್ವಹಣೆ ಇಲ್ಲದೆ ಸೋಲಾರ್‌ಗಳು ಕಾಡು ಸೇರಿವೆ.! ಕಾಡಾನೆಗಳು ಮತ್ತೆ ಅರಣ್ಯ ಪ್ರದೇಶದಿಂದ ರೈತರ ಕಾಫಿ ತೋಟಗಳಿಗೆ ಯಾವುದೇ ಅಡೆತಡೆ ಇಲ್ಲದೆ ಆಗಮಿಸುತ್ತಿವೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇತ್ತ ಜಿಲ್ಲೆಯಿಂದ ತೆರಳುತ್ತಿದ್ದಂತೆಯೇ ಇದರ ಕಾರ್ಯ ನಿರ್ವಹಣೆ ಕೇಳುವವರೆ ಇಲ್ಲದಂತಾಗಿದೆ. ಲಕ್ಷಾಂತರ ವೆಚ್ಚದ ಸರ್ಕಾರದ ಹಣ ಮಣ್ಣು ಪಾಲಾಗಿದೆ.!

ತಾತ್ಕಾಲಿಕ ನೌಕರರ ಪರದಾಟ..!

ಈ ಭಾಗದಲ್ಲಿ ನಿರಂತರ ಕಾಡಾನೆಗಳ ಸಮಸ್ಯೆ ಇದ್ದರೂ, ಇವುಗಳ ನಿಯಂತ್ರಣಕ್ಕೆ ಬೇಕಾದ ಸಿಬ್ಬಂದಿಗಳು ಮಾತ್ರ ಬೆರಳೆಣಿಕೆಯಷ್ಟು. ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ನಿರಾಸಕ್ತಿ ತೋರಿರು ವುದು ಎದ್ದು ಕಾಣುತ್ತಿದೆ. ನಿಗದಿತ ಸಮಯದಲ್ಲಿ ವೇತನ ನೀಡದಿರುವುದು, ಉತ್ತಮ ಸಲಕರಣೆಗಳನ್ನು ಒದಗಿಸದಿರುವುದು, ರಾತ್ರಿ ವೇಳೆ ವಾಹನ ಸೌಕರ್ಯ ನೀಡದಿರುವುದು, ಇರುವ ವಾಹನಗಳು ದುರಸ್ತಿಯಲ್ಲಿರು ವುದು, ಖಾಯಂ ಅಧಿಕಾರಿ ಇಲ್ಲದೆ ಇರುವುದು ಈ ಭಾಗದಲ್ಲಿ ಕಾಡಾನೆಗಳ ಉಪಟಳಕ್ಕೆ ಒಂದು ಕಾರಣಗಳಾಗಿವೆ.