ಸೋಮವಾರಪೇಟೆ, ಸೆ. ೬: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಈ ಬಾರಿ ಅದ್ಧೂರಿ ಆಯುಧ ಪೂಜೋತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ತಿಳಿಸಿದ್ದಾರೆ. ಕಳೆದ ೨ ವರ್ಷಗಳಿಂದ ಕೊರೊನಾ ಹಿನ್ನೆಲೆ ದಸರಾ ಮಾದರಿ ನಡೆಯುತ್ತಿದ್ದ ಆಯುಧ ಪೂಜೋತ್ಸವವನ್ನು ಸ್ಥಗಿತಗೊಳಿಸಿದ್ದು, ಈ ಬಾರಿ ಅಕ್ಟೋಬರ್ ೪ ರಂದು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಆಯುಧ ಪೂಜೋತ್ಸವ ಅಂಗವಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗುವುದು. ಕನ್ನಡ ಕೋಗಿಲೆ ಹಾಗೂ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ಸಂಜೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ೩ ವಿಭಾಗಗಳಲ್ಲಿ ನೃತ್ಯ ಸ್ಪರ್ಧೆ, ಸಂಘದ ಸದಸ್ಯರಿಗೆ ಕ್ರೀಡಾಕೂಟ, ಸಾವಿರಾರು ಮಂದಿಗೆ ಅನ್ನದಾನ, ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ದಾನಿಗಳ ಸಹಕಾರದಿಂದ ಆಯೋಜಿಸಲಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ.