*ಗೋಣಿಕೊಪ್ಪ, ಸೆ. ೬: ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ವಿದ್ಯಾರ್ಥಿಗಳು ದೇಶಭಕ್ತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಸೇರಿ ೭೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ದೇಶಭಕ್ತಿಗೆ ಸಾಕ್ಷಿಯಾದರು.

ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಆಳ್ವಿಕೆ ಕತೆಗೆ ಪೂರಕ ನಾಟಕ ಪ್ರದರ್ಶನ ನೀಡಿದರು. ಹಂಪಿ ವೈಭವವನ್ನು ಸಾರುವ ಮೂಲಕ ಸ್ಥಳೀಯ ಐತಿಹಾಸಿಕ ಹಿನ್ನೆಲೆಯನ್ನು ನೆನಪಿಸಿಕೊಂಡರು.

ಮಹಾತ್ಮ ಗಾಂಧಿ, ಮಂಗಲ್ ಪಾಂಡೆ ಹೋರಾಟ, ಮಿಲಿಟರಿ ಪರೆಡ್, ಜಾನ್ಸಿ ರಾಣಿ ಲಕ್ಷಿö್ಮ ಬಾಯಿ ಅವರ ಚರಿತ್ರೆ ಎಲ್ಲವೂ ನಾಟಕದ ಮೂಲಕ ಮತ್ತೆ ನೆನೆಯುವಂತೆ ಮಾಡಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಪಿ. ಕೃಷ್ಣಭಟ್ ಮಾತನಾಡಿ, ದೇಶಪ್ರೇಮ ಮೂಡಿಸುವ ಕಾರ್ಯಕ್ರಮಗಳು ಮಕ್ಕಳಲ್ಲಿ ಸದ್ಗುಣ ಮೈಗೂಡಿಸಿ ಕೊಳ್ಳಲು ಸಹಕಾರಿಯಾಗುತ್ತದೆ. ಸಂವಹನ ಶಕ್ತಿ ವೃದ್ಧಿಸುತ್ತದೆ ಎಂದರು. ಪ್ರಾಂಶುಪಾಲ ಡಾ. ಬೆನ್ನಿ ಕುರಿಯಕೊಸ್ ವಿದ್ಯಾರ್ಥಿಗಳ ಸಾಧನೆಗಳ ಮಾಹಿತಿ ನೀಡಿದರು.

ಕಾಪ್ಸ್ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಮಾಚಿಮಾಡ ಎಂ. ತಿಮ್ಮಯ್ಯ ಇದ್ದರು.