ಮಡಿಕೇರಿ, ಸೆ. ೬: ಕೊರೊನಾ ಹಾಗೂ ಪ್ರಾಕೃತಿಕ ವಿಕೋಪ ಪರಿಸ್ಥಿತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವ ಈ ಬಾರಿ ಪುನರಾರಂಭಗೊಳ್ಳಲಿದ್ದು, ಫೆಬ್ರವರಿ ೨೦ ರಿಂದ ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಗೆ ಚಾಲನೆ ದೊರೆಯಲಿದೆ ಎಂದು ಕುಟುಂಬ ಹಾಗೂ ಹಾಕಿ ಉತ್ಸವದ ಅಧ್ಯಕ್ಷ ಮನು ಮುತ್ತಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ರಲ್ಲಿ ಕುಲ್ಲೇಟ್ಟಿರ ಕುಟುಂಬ ಹಾಕಿ ಪಂದ್ಯಾಟ ನಡೆಸಿದ ಬಳಿಕ ಪ್ರತಿಕೂಲ ಪರಿಸ್ಥಿತಿಯಿಂದ ಪಂದ್ಯಾಟ ನಡೆಸಲು ಸಾಧ್ಯವಾಗಲಿಲ್ಲ. ಈ ಬಾರಿ ಅದ್ಧೂರಿಯಾಗಿ ೨೩ನೇ ವರ್ಷದ ಪಂದ್ಯಾಟ ನಡೆಸಲು ಪೂರ್ವ ತಯಾರಿ ನಡೆಯುತ್ತಿದೆ. ನಾಪೋಕ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಮೂರು ಮೈದಾನಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, ೩೫೦ ಕ್ಕೂ ಹೆಚ್ಚು ಕುಟುಂಬಗಳು ಭಾಗವಹಿಸಲಿವೆ ಎಂಬ ನಿರೀಕ್ಷೆ ಇದೆ ಎಂದು ವಿವರಿಸಿದರು.

ಫೆಬ್ರವರಿ ೨೦ಕ್ಕೆ ಆರಂಭಗೊಳ್ಳ ಲಿರುವ ಪಂದ್ಯಾವಳಿ ಮಾರ್ಚ್ ೬ರ ತನಕ ನಡೆಯಲಿದೆ. ಪಂದ್ಯಾಟದ ಅಂಗವಾಗಿ ತಯಾರು ಮಾಡಿರುವ ‘ವೆಬ್‌ಸೈಟ್’ ಹಾಗೂ ‘ಲೋಗೋ’ ವನ್ನು ಅಕ್ಟೋಬರ್ ೨ ರಂದು ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇದೇ ಸಂದರ್ಭ ಬಾಚರಣಿಯಂಡ ಅನು ಕಾರ್ಯಪ್ಪ ಬರೆದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬಗೆಗಿನ ಪುಸ್ತಕವನ್ನು ಲೋಕಾರ್ಪಣೆಗೊಳಿಸ ಲಾಗುವುದು ಎಂದು ತಿಳಿಸಿದರು.

ಒಟ್ಟಾರೆ ಕಾರ್ಯಕ್ರಮಕ್ಕೆ ರೂ. ೧.೫೦ ಕೋಟಿ ವೆಚ್ಚ ತಗುಲಲಿದ್ದು, ಸರಕಾರಕ್ಕೆ ರೂ. ೧ ಕೋಟಿ ಬೇಡಿಕೆ ಇಟ್ಟಿದ್ದೇವೆ. ಕನಿಷ್ಟ ರೂ. ೫೦ ಲಕ್ಷ ಅನುದಾನ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ವ್ಯವಸ್ಥಿತವಾಗಿ ಪಂದ್ಯಾಟ ಆಯೋಜನೆ ಮಾಡಲಾಗುತ್ತದೆ. ತಂಡಗಳ ನೋಂದಣಿ ಸೇರಿದಂತೆ ಇತರ ಪ್ರಕ್ರಿಯೆಗಳು ಅಕ್ಟೋಬರ್ ಬಳಿಕ ನಡೆಯಲಿವೆ. ವಿಶ್ವ ಪ್ರಸಿದ್ಧ ಕೊಡವ ಕೌಟುಂಬಿಕ ಹಾಕಿ ನಮ್ಮೆ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಕುಟುಂಬದ ಪಟ್ಟೆದಾರ ಮಿಟ್ಟು ಈರಪ್ಪ, ಸದಸ್ಯರುಗಳಾದ ಶ್ಯಾಂ ಕಾಳಯ್ಯ, ರವಿ ಮೊಣ್ಣಪ್ಪ, ಪೂ ದೇವಯ್ಯ, ನವೀನ್ ಅಪ್ಪಯ್ಯ ಹಾಜರಿದ್ದರು.