ಮಡಿಕೇರಿ, ಸೆ. ೪: ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಘಟನೆ ಬೋಯಿಕೇರಿ ಬಳಿ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಗ್ಗೆ ಮಂಗಳೂರು ಮೂಲಕ ಮಡಿಕೇರಿಗೆ ಅಗಮಿಸಿದ ಬಸ್ ಮಧ್ಯಾಹ್ನದ ಬಳಿಕ ಮಡಿಕೇರಿಯ ಬಸ್ ನಿಲ್ದಾಣದಿಂದ ಸುಮಾರು ೨೪ ಪ್ರಯಾಣಿಕರನ್ನು ಕರೆದೊಯ್ಯುವ ಸಂದರ್ಭದಲ್ಲಿ ಮಡಿಕೇರಿ ಸಮೀಪದ ಬೋಯಿಕೇರಿ ರಸ್ತೆ ತಿರುವಿನಲ್ಲಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಸಂಚರಿಸಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ. ಇದೇ ಸಂದರ್ಭ ಕುಶಾಲನಗರದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಬೈಕ್ ಬಸ್ ಅಡಿಗೆ ಸಿಲುಕಿದ್ದು, ಸವಾರ ಮಡಿಕೇರಿಯ ನಿವಾಸಿ, ಶ್ರೀಕಂಠಮೂರ್ತಿ (೪೨) ಎಂಬಾತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೈ ಹಾಗೂ ಭುಜಕ್ಕೆ ಗಂಭೀರ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್‌ನ ಚಾಲಕ ಹಾಗೂ ನಿರ್ವಾಹಕ ಕೂಡ ಅಪಾಯದಿಂದ ಪಾರಾಗಿದ್ದಾರೆ.

ಬ್ರೇಕ್ ವೈಫಲ್ಯ ಅವಘಡಕ್ಕೆ ಕಾರಣ ಎನ್ನಲಾಗಿದ್ದು,

ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಹಿಂಬದಿಯ ಗಾಜನ್ನು ಒಡೆದು ಸಾರ್ವಜನಿಕರು ಇಳಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.