ಸಿದ್ದಾಪುರ, ಸೆ. ೪: ಕಾಫಿ ಕಳ್ಳತನ ಮಾಡಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಅಮ್ಮತ್ತಿಯ ಪಟ್ಟಡ ಮಾಚಯ್ಯ ಎಂಬವರಿಗೆ ಸೇರಿದ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ಗ್ರಾಮದಲ್ಲಿರುವ ಕಾಫಿ ಗೋದಾಮಿನ ಮೇಲ್ಭಾಗದ ಶೀಟು ತೆಗೆದು ಕಾಫಿಯನ್ನು ಚೀಲಸಹಿತ ಕಳ್ಳತನ ಮಾಡಿದ್ದ ಆರೋಪಿಗಳು ಕಳ್ಳತನ ಮಾಡಿದ ಕಾಫಿಯನ್ನು ಗೋಣಿಕೊಪ್ಪಲುವಿನ ಎರಡು ಅಂಗಡಿಗಳಿಗೆ ಮಾರಾಟ ಮಾಡಿ ತಲೆಮರೆಸಿಕೊಂಡಿದ್ದರು. ಅಂದಾಜು ರೂ.೨.೫೦ ಲಕ್ಷ ಮೌಲ್ಯದ ಕಾಫಿ ಕಳ್ಳತನ ಮಾಡಿರುವ ಬಗ್ಗೆ ಮಾಚಯ್ಯ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸರು ತನಿಖೆ ನಡೆಸಿ ಕಾಫಿ ಕಳ್ಳತನ ಮಾಡಿ ಮಾರಾಟ ಮಾಡಿದ ಪ್ರಕರಣದ ಆರೋಪಿಗಳಾದ ಸ್ಥಳೀಯ ನಿವಾಸಿಗಳಾದ ಮಣಿ, ಮಂಜು, ಅಯ್ಯಪ್ಪ, ಸುರೇಶ್ ಕುಮಾರ್ ಹಾಗೂ ಹೊಲಮಾಳದ ಲಕ್ಷö್ಮಣ, ಚೆನ್ನಂಗಿಯ ಕಾಳನನ್ನು ಬಂಧಿಸಿ ಒಂದು ಮಾರುತಿ ಓಮ್ನಿ ಹಾಗೂ ಒಂದು ಆಟೋವನ್ನು ಹಾಗೂ ಕಾಫಿಯನ್ನು ವಶಪಡಿಸಿ ಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಅಯ್ಯಪ್ಪ ಮಾರ್ಗ ದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕ ಗಜೇಂದ್ರ ಪ್ರಸಾದ್, ಮಡಿಕೇರಿ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ನೇತೃತ್ವದಲ್ಲಿ, ಸಿದ್ದಾಪುರ ಠಾಣಾಧಿಕಾರಿ
(ಮೊದಲ ಪುಟದಿಂದ) ಮೋಹನ್‌ರಾಜ್, ಎ.ಎಸ್.ಐ. ತಮ್ಮಯ್ಯ, ಮುಖ್ಯಪೇದೆಗಳಾದ ಲಕ್ಷಿö್ಮÃಕಾಂತ್, ರತನ್, ಕಿರಣ್, ಸುಧೀರ್, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಹೆಚ್.ಕೆ. ವಸಂತಕುಮಾರ್, ಮಲ್ಲಪ್ಪ ಮುಶಿಗೇರಿ, ಬಸವರಾಜು, ಕಿರಣ್ ಕುಮಾರ್, ಶಿವಪ್ಪ ಹಾಗೂ ಸಿ.ಡಿ.ಆರ್. ವಿಭಾಗದ ಸಿಬ್ಬಂದಿಗಳಾದ ಗಿರೀಶ್, ರಾಜೇಶ್ ಹಾಗೂ ಪ್ರವೀಣ್, ಚಾಲಕರುಗಳಾದ ದೇವರಾಜು, ಗೋವರ್ಧನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
-ವಾಸು.