ಮಡಿಕೇರಿ, ಸೆ. ೪ : ನಮ್ಮ ದಿನಚರಿಯನ್ನು ಪ್ರಾರಂಭಿಸುವ ಸಮಯದಲ್ಲಿಯೇ ಅಂದಿನ ಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಶ್ರಮಜೀವಿಗಳಾದ ಪತ್ರಿಕಾ ವಿತರಕರ ಒಳಿತಿಗಾಗಿ ಮುಂದಿನ ದಿನಗಳಲ್ಲಿ ಸೂಕ್ತ ಯೋಜನೆಗಳನ್ನು ಜಾರಿಗೊಳಿಸಲು ಜಿಲ್ಲಾಡಳಿತ ನೆರವು ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಭರವಸೆ ನೀಡಿದ್ದಾರೆ.

ಕೊಡಗು ಪತ್ರಕರ್ತರ ಸಂಘ, ಕೊಡಗು ಜಿಲ್ಲಾ ಪತ್ರಿಕಾ ವಿತರಕರ ಹಾಗೂ ಏಜೆಂಟರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪತ್ರಿಕಾ ವಿತರಕರರಿಗೆ ಎಲ್ಲಾ ಸಹಕಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇ ಪೇಪರ್ ಓದುವುದಕ್ಕಿಂತ ಪ್ರಕಟಿತ ಪತ್ರಿಕೆ ಓದುವ ಅನುಭವ ಮನಸ್ಸಿಗೆ ತೃಪ್ತಿ ನೀಡುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಪತ್ರಿಕಾ ವಿತರಕರಿಗೆ ಸೂಕ್ತ ಮಳಿಗೆಯ ಬೇಡಿಕೆ ನಿಟ್ಟಿನಲ್ಲಿ ಮಡಿಕೇರಿ ನಗರಸಭೆಯ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ವಿಶೇಷ ಸಭೆಯನ್ನು ನಡೆಸಿ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗುವುದು ಎಂದೂ ಡಾ.ಬಿ.ಸಿ ಸತೀಶ ಹೇಳಿದರು.

ಈಗಿನ ಡಿಜಿಟಲ್ ಯುಗದಲ್ಲಿ ವಾಟ್ಸಪ್ ಸೋಶಿಯಲ್ ಮೀಡಿ ಯಾದಲ್ಲಿ ಹಾಗೂ ದೃಶ್ಯಮಾಧ್ಯಮ ಗಳಲ್ಲಿ ಸುದ್ದಿ ತಕ್ಷಣ ಲಭಿಸುತ್ತಿದ್ದರೂ, ಪ್ರತಿನಿತ್ಯ ಬೆಳಿಗ್ಗೆ ಪತ್ರಿಕೆಯನ್ನು ಓದುವ ಹವ್ಯಾಸವನ್ನು ಇಂದಿಗೂ ನಾನು ರೂಢಿಸಿಕೊಂಡಿದ್ದೇನೆ. ಅದರಲ್ಲೂ ಸ್ಥಳೀಯ ಪತ್ರಿಕೆಯನ್ನು ಓದಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ತಿಳಿದು ನನ್ನ ದಿನಚರಿಯನ್ನು ಪ್ರಾರಂಭಿಸುತ್ತೇನೆ ಎಂದು ತಿಳಿಸಿದರು. ಮುಂಜಾನೆ ೪ ಗಂಟೆಗೆ ಪ್ರಾರಂಭವಾಗುವ ಪತ್ರಿಕಾ ವಿತರಕರ ದಿನಚರಿ ನಿಜಕ್ಕೂ ಶ್ರಮ ದಿಂದ ಕೂಡಿದೆ. ಇಂಥ ಶ್ರಮಜೀವಿ ಪತ್ರಿಕಾ ವಿತರಕರನ್ನು ಗುರುತಿಸಿ ಗೌರವಿಸುವ ಈ ವಿಭಿನ್ನ ಕಾರ್ಯಕ್ರಮ ಶ್ಲಾಘನೀಯ ಎಂದೂ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈಗಿನ ತಂತ್ರಜ್ಞಾನದಲ್ಲಿ ದೃಶ್ಯಮಾಧ್ಯಮದಲ್ಲಿ ಶೀಘ್ರವಾಗಿ ಸುದ್ದಿ ಜನರಿಗೆ ತಲುಪುತ್ತಿದೆಯಾದರೂ ಆ ಸುದ್ದಿಯನ್ನು ವಿಶ್ಲೇಷಣೆ ಮಾಡಿ ಅವಲೋಕಿಸಿ ತಿಳಿಯಬೇಕೆಂದರೆ ಪತ್ರಿಕೆಗಳನ್ನು ಓದಬೇಕು ಎಂದು ತಿಳಿಸಿದರು.

ಒಂದು ಪತ್ರಿಕಾ ಮಾಧ್ಯಮ ಸಂಸ್ಥೆ ಉತ್ತಮವಾಗಿ ನಡೆಯಬೇಕೆಂದರೆ ಆ ಪತ್ರಿಕಾ ಮಾಧ್ಯಮ ಸಂಸ್ಥೆಯ ಕಚೇರಿ ಸಿಬ್ಬಂದಿ ವರ್ಗ, ಕಂಪ್ಯೂಟರ್ ಆಪರೇಟರ್, ಸಂಪಾದಕರ ಬಳಗ, ಪತ್ರಿಕೆಯನ್ನು ಪ್ರಿಂಟ್ ಮಾಡುವವರು ಅದೇ ರೀತಿ ಪತ್ರಿಕೆಯನ್ನು ಬಂಡಲ್ ಮಾಡುವವರು, ಪತ್ರಿಕೆಯನ್ನು ವಿತರಣೆ ಮಾಡುವವರ ಶ್ರಮ ಅಷ್ಟೇ ಮುಖ್ಯವಾಗಿದೆ. ಅದರಲ್ಲೂ ಪತ್ರಿಕಾ ವಿತರಕರು ತುಂಬಾ ಮುಖ್ಯ ಪಾತ್ರ ವಹಿಸುತ್ತಾರೆ. ಪತ್ರಿಕೆಯು ತಯಾರಾದ ನಂತರ ಅದನ್ನು ಓದುಗರಿಗೆ ತಲುಪಿಸದೆ ಹೋದರೆ ಅಲ್ಲಿಯವರೆಗೆ ಮಾಡಿದಂತಹ ಪ್ರಯತ್ನ ನಿಷ್ಪçಯೋಜಕ ವಾಗುತ್ತದೆ. (ಮೊದಲ ಪುಟದಿಂದ) ಆದ್ದರಿಂದ ಪತ್ರಿಕಾ ವಿತರಕರು ತುಂಬಾ ಮುಖ್ಯ ಪಾತ್ರ ವಹಿಸುತ್ತಾರೆ. ಅಲ್ಲದೆ ಮಡಿಕೇರಿಯಂತಹ ಬೆಟ್ಟ ಗುಡ್ಡದ ಪ್ರದೇಶದಲ್ಲಿ ತುಂಬಾ ಹೆಚ್ಚು ಶ್ರಮಪಟ್ಟು ಮಳೆ ಚಳಿ ಇದ್ದರು ತಮ್ಮ ಕಾರ್ಯವನ್ನು ಒಂದು ತಪಸ್ಸಿನಂತೆ ಪತ್ರಿಕಾ ವಿತರಕರು ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಪತ್ರಿಕಾ ವಿತರಣೆ ಮಾಡುವಾಗ ಒಂದು ಮನೆ ಕೂಡ ಬಿಟ್ಟು ಹೋಗದಂತೆ ತುಂಬಾ ನಿಗಾವಹಿಸುತ್ತಾರೆ ಎಂದೂ ಜಿ.ರಾಜೇಂದ್ರ ಅವರು ಶ್ಲಾಘಿಸಿದರು.

ಕೊರೊನಾ ಪರಿಸ್ಥಿತಿಯಲ್ಲಿ ಪತ್ರಿಕಾ ವಿತರಣೆಗೆ ಹೋದ ಸಂದರ್ಭ ಪತ್ರಿಕಾ ವಿತರಕರಿಗೆ ಪೊಲೀಸರಿಂದ ಲಾಠಿ ಏಟು ಸಿಕ್ಕ ಸಂದರ್ಭ ಪತ್ರಕರ್ತರು, ಪತ್ರಿಕಾ ವಿತರಕರಿಗೆ ಬೆಂಗಾವಲಾಗಿ ನಿಂತ ಅನುಭವವಿದೆ. ಅಲ್ಲದೆ ೧೪೪ ಸೆಕ್ಷನ್ ಇರುವ ಸಂರ್ಭದಲ್ಲಿ ಕೂಡ ವಿತರಕರಿಗೆ ಸವಾಲುಗಳು ಎದುರಾದಾಗ ಪತ್ರಕರ್ತರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದೂ ರಾಜೇಂದ್ರ ಅವರು ಸ್ಮರಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಟಿ.ಪಿ. ರಮೇಶ್ ಪತ್ರಿಕಾ ವಿತರಕರ ದಿನಾಚರಣೆ ಕೊಡಗಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದೆ. ಇನ್ನು ಮುಂದೆ ಕೊಡಗು ಪತ್ರಕರ್ತರ ಸಂಘವು ಪತ್ರಿಕಾ ವಿತರಕರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಪತ್ರಿಕಾ ವಿತರಕರಿಗೆ ಪತ್ರಿಕೆಯನ್ನು ವಿತರಣೆ ಮಾಡಲು ಸೂಕ್ತವಾದ ವ್ಯವಸ್ಥೆಯನ್ನು ನಗರದಲ್ಲಿ ಮಾಡಿಕೊಡಬೇಕೆಂದು ಅವರು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು.

ಸಮಾಜ ಸೇವಕರಾದ ನಾಪಂಡ ಎಂ. ಮುತ್ತಪ್ಪ ಮಾತನಾಡಿ, ಪತ್ರಿಕಾ ವಿತರಕರದ್ದು ಅಸಂಘಟಿತ ಕ್ಷೇತ್ರವಾಗಿದ್ದು ಅವರಿಗೆ ಪ್ರಸ್ತುತ ಸರ್ಕಾರದಿಂದ ಭವಿಷ್ಯನಿಧಿಯಂತಹ ಹಲವಾರು ಯೋಜನೆಗಳು ದೊರೆಯುತ್ತಿದೆ, ಅದನೆಲ್ಲಾ ವಿತರಕರು ಸದುಪಯೋಗ ಮಾಡಿಕೊಳ್ಳುವಂತೆ ಕೋರಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರ್ ಕುದುರೆಮೋತಿ ಮಾತನಾಡಿ ಪತ್ರಕರ್ತರ ಸಂಘ ಪತ್ರಿಕಾ ವಿತರಕರ ಜೊತೆ ಇದ್ದಾಗ ಮಾತ್ರ ವಿತರಕರು ಬೆಳಕಿಗೆ ಬರಲು ಸಾಧ್ಯ. ಪತ್ರಿಕಾ ವಿತರಕರ ದಿನಾಚರಣೆ ಜೊತೆಗೆ ಪತ್ರಿಕಾ ವಿತರಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಒಳ್ಳೆಯ ಪ್ರಯತ್ನ. ಇನ್ನು ಮುಂದೆಯೂ ಕೂಡ ಹಲವಾರು ಕಾರ್ಯಕ್ರಮಗಳ ಮೂಲಕ ಪತ್ರಿಕಾ ವಿತರಕರಿಗೆ ಉತ್ತಮ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸಬೇಕೆಂದು ಮನವಿ ಮಾಡಿದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿ ಸಾಮಾನ್ಯವಾಗಿ ತಮ್ಮ ಮನೆಗೆ ಬರುವ ಪತ್ರಿಕಾ ವಿತರಕರು ಯಾರೆಂದು ಕೂಡಾ ತಿಳಿಯುವುದಿಲ್ಲ. ಏಕೆಂದರೆ ಮನೆ ಮಂದಿ ಬೆಳಗ್ಗೆ ಎದ್ದೇಳುವ ಮೊದಲೇ ಮನೆ ಬಾಗಿಲಿಗೆ ಪತ್ರಿಕೆ ತಲುಪಿರುತ್ತದೆ. ಪತ್ರಿಕೋದ್ಯಮ ಇಲ್ಲಿಯವರೆಗೆ ಬೆಳೆಯಲು ಪತ್ರಿಕಾ ವಿತರಕರ ಶ್ರಮವೂ ಹೆಚ್ಚಿದೆ ಎಂದು ತಿಳಿಸಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಪತ್ರಿಕಾ ವಿತರಕರ ದಿನಾಚರಣೆಯನ್ನು ನಮ್ಮ ಸಂಘ ಆಯೋಜನೆ ಮಾಡಿದೆ. ಇದಕ್ಕೆ ಪತ್ರಿಕಾ ವಿತರಕರಿಂದಲೂ ಕೂಡ ಉತ್ತಮವಾದ ಸ್ಪಂದನೆ ದೊರೆತಿದೆ. . ಪತ್ರಿಕಾ ವಿತರಕರ ದಿನಾಚರಣೆ ಜೊತೆಗೆ ಪತ್ರಿಕಾ ವಿತರಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಕೇವಲ ಸನ್ಮಾನಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕರ ಅಭಿವೃಧ್ಧಿಗೆ ಕೊಡಗು ಪತ್ರಕರ್ತರ ಸಂಘ ಶ್ರಮಿಸುತ್ತದೆ, ಇದಕ್ಕೆ ಪತ್ರಿಕಾ ವಿತರಕರೆಲ್ಲರ ಬೆಂಬಲವೂ ಅಗತ್ಯ ಎಂದು ಕೋರಿದರು.

ಕೊಡಗು ಜಿಲ್ಲಾ ಪತ್ರಿಕಾ ವಿತರಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಟಿ.ಜೆ. ಸತೀಶ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸುಮಾರು ೬೦ಕ್ಕೂ ಅಧಿಕ ಪತ್ರಿಕಾ ವಿತರಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಂಘದ ನಾಮನಿರ್ದೇಶಿತ ನಿರ್ದೇಶಕ ಕುಡೆಕಲ್ ಸಂತೋಷ್ ನಿರೂಪಿಸಿ, ನಿಧಿ ಹಾಗೂ ವಿದ್ಯಾ ಪ್ರಾರ್ಥಿಸಿದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಸ್ವಾಗತಿಸಿ, ಸುರೇಶ್ ಬಿಳಿಗೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.