ನಾಪೋಕ್ಲು, ಸೆ. ೪: ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಗೆ ಒಳಪಟ್ಟ ೫೪ ಏಕರೆ ಜಾಗದಲ್ಲಿ ಹಲವು ಎಕರೆಯನ್ನು ಒತ್ತುವರಿ ಮಾಡಿಕೊಂಡಿರುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಶಾಲೆಯ ಜಾಗದ ಹದ್ದುಬಸ್ತು ಸರ್ವೇ ನಡೆಸಲಾಯಿತು.

ಸ್ಥಳೀಯ ದಾನಿಗಳು ನೀಡಿದ ಹಾಗೂ ಪೈಸಾರಿ ಜಾಗ ಸೇರಿ ಈ ಶಾಲೆಯ ಹೆಸರಿನಲ್ಲಿ ಸುಮಾರು ೫೪ ಏಕರೆ ಜಾಗ ಇದೆ. ಇದನ್ನು ಕೆಲವರು ೧೯೯೦ನೇ ಇಸವಿಯಿಂದಲೇ ಒತ್ತುವರಿ ಮಾಡಿಕೊಂಡಿರುವದಾಗಿ ಕಂದಾಯ ಇಲಾಖೆಗೆ ದೂರು ನೀಡಲಾಗಿತ್ತು. ಆದರೂ ಯಾವದೇ ಕ್ರಮಕೈಗೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಶಾಲಾ ಆಡಳಿತ ಮಂಡಳಿ ಸ್ಥಳದಾನಿಗಳ ಕುಟುಂಬಸ್ಥರು, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಸ್ಥಳೀಯರು, ಕಂದಾಯ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಒತ್ತುವರಿ ತೆರವುಗೊಳಿಸುವಂತೆ ಮನವಿ ಪತ್ರ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಒತ್ತುವರಿ ತೆರವಿಗೆ ಕ್ರಮ ಕೈಗೊಂಡ ಜಿಲ್ಲಾಧಿಕಾರಿಗಳು ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಹದ್ದುಬಸ್ತು ಸರ್ವೇ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮಹೇಶ್, ಮೊದಲ ಬಾರಿಗೆ ಹದ್ದುಬಸ್ತು ಸರ್ವೇ ನಡೆಸಲಾಗುತ್ತಿದೆ. ನಂತರ ಈ ಜಾಗವನ್ನು ಒತ್ತುವರಿ ಮಾಡಿಕೊಂಡವರ ಬಗ್ಗೆ ಮಾಹಿತಿ ಪಡೆದು ಅವರಿಗೆ ನೋಟೀಸ್ ನೀಡಿ ಮತ್ತೆ ಸರ್ವೇ ಕಾರ್ಯ ನಡೆಸಲಾಗುವದು ಎಂದು ಹೇಳಿದರು.

ಶಾಲೆಯ ಕಟ್ಟಡ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ, ಶೈಕ್ಷಣಿಕ ಗುಣಮಟ್ಟ ಖಾತರಿ ಸಮಿತಿ ಅಧ್ಯಕ್ಷ ಎನ್.ಎಸ್.ಉದಯ ಶಂಕರ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಳೇ ವಿದ್ಯಾರ್ಥಿಗಳು, ಸ್ಥಳ ದಾನಿಗಳ ಕುಟುಂಬಸ್ಥರು, ಗ್ರಾಮಸ್ಥರು, ಶಾಲೆಯ ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ, ಉಪಪ್ರಾಂಶುಪಾಲ ಶಿವಣ್ಣ, ನಾಪೋಕ್ಲು ವೃತ್ತ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಅಮೃತಾ, ಸರ್ವೇ ಇಲಾಖೆಯ ಅಧಿಕಾರಿಗಳು, ಮತ್ತಿತರರು ಇದ್ದರು. ನಾಪೋಕ್ಲು ಠಾಣಾಧಿಕಾರಿ ಕೆ.ಸದಾಶಿವ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.