ಗೋಣಿಕೊಪ್ಪಲು, ಸೆ.೪: ಇತ್ತೀಚೆಗೆ ಸುರಿದಿದ್ದ ಭಾರೀ ಮಳೆಯಿಂದಾಗಿ ರೈತರು ಬೆಳೆದಿದ್ದ ಕಾಫಿ ಫಸಲು ಉದುರಲಾರಂಭಿಸಿದ್ದವು.ಇದರಿAದ ವಿಶೇಷವಾಗಿ ದ.ಕೊಡಗಿನ ಅನೇಕ ಗ್ರಾಮಾಂತರ ಪ್ರದೇಶದ ರೈತರು ಕಂಗಲಾಗಿದ್ದರು. ಮಳೆ ಹಿನ್ನೆಲೆಯಲ್ಲಿ ಉದುರಿದ್ದ ಕಾಫಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಬಹುತೇಕ ಗ್ರಾಮಗಳನ್ನು ಸರ್ವೆ ಮಾಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದ್ದರು.

ಈ ಬಗ್ಗೆ ರೈತರು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪನವರ ಬಳಿ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದರು. ರೈತರ ಆಹವಾಲನ್ನು ಗಂಭೀರವಾಗಿ ಪರಿಗಣಿಸಿದ ರೈತ ಸಂಘದ ಪದಾಧಿಕಾರಿಗಳು ಈ ಬಗ್ಗೆ ಸಮಗ್ರ ವರದಿ ಪಡೆಯುವಂತೆ ಮನವಿ ಮಾಡಿದ್ದರು.

ವಿಶೇಷವಾಗಿ ದ.ಕೊಡಗಿನ ಕುರ್ಚಿ,ಶ್ರೀಮಂಗಲ,ಬೀರುಗ,ವೆಸ್ಟ್ನೆಮ್ಮಲೆ, ಬಾಡಗರ ಕೇರಿ,ಬಿರುನಾಣಿ,ತೆರಾಲು ಹಾಗೂ ಬಿ.ಶೆಟ್ಟಿಗೇರಿಯ ಹಲವು ಭಾಗಗಳಲ್ಲಿ ಅಧಿಕಾರಿಗಳು ಹಾಗೂ ಕಾಫಿ ಬೋರ್ಡ್ ವಿಜ್ಞಾನಿಗಳು ಸಮಗ್ರ ಸರ್ವೆ ನಡೆಸುವಂತೆ ಕೊಡಗು ಜಿಲ್ಲಾಧಿಕಾರಿಗಳಾದ ಡಾ.ಬಿ.ಸಿ.ಸತೀಶ್‌ರವರನ್ನು ರೈತ ಸಂಘದ ಅಧ್ಯಕ್ಷರಾದ ಮನುಸೋಮಯ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಖುದ್ದು ಭೇಟಿ ನೀಡಿ ರೈತರ ಪರಿಸ್ಥಿತಿಗಳನ್ನು ವಿವರಿಸಿದ್ದರು. ಅಲ್ಲದೆ ಮಳೆಯಿಂದ ತೊಂದರೆ ಗೀಡಾದ ಪ್ರತಿ ರೈತರಿಗೆ ಪರಿಹಾರ ಒದಗಿಸಲು ವಿಶೇಷ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳ ಬಳ ಮನವಿ ಮಾಡಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳು ವಿಶೇಷ ತಂಡವನ್ನು ಸರ್ವೆ ಕಾರ್ಯಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದ್ದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಭೇಟಿಯ ನಂತರ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಶ್ರೀಮಂಗಲ ಭಾಗದ ಕಾಫಿ ಬೋರ್ಡ್ ನಿರ್ದೇಶಕರಾದ ಮಚ್ಚಮಾಡ ಡಾಲಿ ಚಂಗಪ್ಪನವರನ್ನು ಈ ಬಗ್ಗೆ ಗಮನ ಸೆಳೆದು ಕಾಫಿ ಬೋರ್ಡ್ನ ಸಿಇಒ ಜಗದೀಶ್‌ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ದ.ಕೊಡಗಿನ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳಿದಿದ್ದರು. ಈ ವೇಳೆ ಹಿರಿಯ ಅಧಿಕಾರಿಗಳು ಕಾಫಿ ಉದುರಿರುವ ಪ್ರದೇಶಗಳಿಗೆ ಕಾಫಿ ಬೋರ್ಡ್ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡ ಕಳುಹಿಸಿಕೊಡುವ ಬಗ್ಗೆ ಭರವಸೆ ನೀಡಿದ್ದರು.

ಶ್ರೀಮಂಗಲ ಭಾಗದಲ್ಲಿ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಭೇಟಿ ನೀಡಿದ್ದ ವೇಳೆ ಅಲ್ಲಿನ ರೈತರು ಈ ಬಾರಿ ಸುರಿದ ಬಾರಿ ಮಳೆಯಿಂದ ರೈತರ ಕಾಫಿ ತೋಟದಲ್ಲಿ ಕಾಯಿಗಳು ಉದುರುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ಈ ಸಂದರ್ಭ ಶಾಸಕರು ರೈತರಿಗೆ ನೀಡುವ ಪರಿಹಾರದಲ್ಲಿ ತಾರತಮ್ಯ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಈ ಎಲ್ಲಾ ಬೆಳವಣಿಗೆಯ ಹಿನ್ನಲೆಯಲ್ಲಿ ಕಾಫಿ ಬೋರ್ಡ್ನ ಹಿರಿಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಶ್ರೀಮಂಗಲ ಹೋಬಳಿಯ ಕುರ್ಚಿ, ಬೀರುಗ,ಸೇರಿದಂತೆ ಇನ್ನಿತರ ರೈತರ ತೋಟಗಳಿಗೆ ತೆರಳಿ ಸರ್ವೆ ಕಾರ್ಯ ನಡೆಸಿದರು.ಇದರಿಂದ ಆತಂಕಕ್ಕೊಳಗಾಗಿದ್ದ ರೈತರು ನಿರಾಳರಾಗಿದ್ದು ನಷ್ಟ ಪರಿಹಾರವನ್ನು ಕಾಫಿ ಬೋರ್ಡ್ ಮೂಲಕ ಸಿಗುವ ಆಶಾ ಭಾವನೆಯಲ್ಲಿದ್ದಾರೆ.ದ.ಕೊಡಗಿನ ಕುರ್ಚಿ, ಬೀರುಗ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ತೋಟದಲ್ಲಿ ಉದುರಿರುವ ಕಾಫಿ ಕಾಯಿಯ ಸರ್ವೆ ಕಾರ್ಯ ನಡೆಸಿದ್ದಾರೆ. ಇದರಿಂದ ರೈತರಿಗೆ ಮುಂದಿನ ದಿನದಲ್ಲಿ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗುವ ಭರವಸೆ ಇದೆ ಎಂದು ಕುರ್ಚಿ ಗ್ರಾಮದ ಕಾಫಿ ಬೆಳೆಗಾರರಾದ ಅಜ್ಜಮಾಡ ಚಂಗಪ್ಪ ಮಾಹಿತಿ ಒದಗಿಸಿದರು.

-ಹೆಚ್.ಕೆ.ಜಗದೀಶ್