ಅನಿಲ್ ಎಚ್.ಟಿ. ಮಡಿಕೇರಿ, ಸೆ. ೨: ಐತಿಹಾಸಿಕ ಮೈಸೂರು ದಸರಾ ನಾಡಹಬ್ಬಕ್ಕೆ ಇನ್ನೇನು ಕೆಲವು ದಿನಗಳಿರುವಂತೆಯೇ ಮೈಸೂರಿನಲ್ಲಿ ಗಜ ದರ್ಬಾರು ಪ್ರಾರಂಭವಾಗಿದೆ. ದಸರಾ ದಿನದಂದು ಕೋಟ್ಯಂತರ ಜನರ ಮನ ಸೆಳೆಯಲಿರುವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ೧೪ ಆನೆಗಳು ತಯಾರಿ ನಡೆಸಿದ್ದು ಈ ಬಾರಿಯೂ ಕೊಡಗಿನ ಆನೆಗಳು ಜಂಬೂಸವಾರಿಯಲ್ಲಿ ಪಾರಮ್ಯ ತೋರಲಿರುವುದು ಹೆಗ್ಗಳಿಕೆಯಾಗಿದೆ.

ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಚಿನ್ನದ ಅಂಬಾರಿ ಹೊರುವ ಪ್ರತಿಷ್ಠಿತ ಕಾರ್ಯಕ್ಕೆ ಸತತ ಮೂರನೇ ವರ್ಷ ಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆ ಆಯ್ಕೆಯಾಗಿದೆ. ಕ್ಯಾಪ್ಟನ್ ಅಭಿಮನ್ಯು ಎಂದೇ ಖ್ಯಾತಿ ಹೊಂದಿರುವ ಸಾಹಸಿ ಅಭಿಮನ್ಯು ಮತ್ತೊಮ್ಮೆ ಕೊಡಗಿನ ಕೀರ್ತಿಯನ್ನು ವಿಶ್ವವಿಖ್ಯಾತ ದಸರಾದಲ್ಲಿ ಮೆರೆಯಲಿದ್ದಾನೆ.

ಅಕ್ಟೋಬರ್ ೫ ರಂದು ನಡೆಯಲಿರುವ ಮೈಸೂರು ದಸರಾದಲ್ಲಿ ೧೪ ಸಾಕಾನೆಗಳು ಜಂಬೂ ಸವಾರಿಯಲ್ಲಿ ಗಾಂಭೀರ್ಯದಿAದ ಹೆಜ್ಜೆ ಹಾಕಲಿವೆ. ಈ ೧೪ ಆನೆಗಳ ಪೈಕಿ ಕೊಡಗಿನ ದುಬಾರೆ, ಮತ್ತಿಗೋಡು ಶಿಬಿರದ ಆನೆಗಳೇ ಹೆಚ್ಚು ಪಾಲ್ಗೊಳ್ಳುತ್ತಿರುವುದು ವಿಶೇಷ.

ಗೋಣಿಕೊಪ್ಪ ಬಳಿಯಲ್ಲಿನ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಗೋಪಾಲಸ್ವಾಮಿ, ಮಹೇಂದ್ರ, ದುಬಾರೆ ಶಿಬಿರದ ಕಾವೇರಿ, ಧನಂಜಯ ಸೇರಿದಂತೆ ಕೊಡಗಿನ ಎರಡು ಸಾಕಾನೆ ಶಿಬಿರಗಳಿಂದ ೬ ಆನೆಗಳು ಪಾಲ್ಗೊಳ್ಳುತ್ತಿವೆ. ಉಳಿದಂತೆ ಮೈಸೂರು ಜಿಲ್ಲೆಯ ಬಳ್ಳೆ ಶಿಬಿರದಿಂದ ಅರ್ಜುನ, ರಾಮಪುರ ಶಿಬಿರದಿಂದ ಚೈತ್ರಾ, ಲಕ್ಷ್ಮಿ ಆನೆಗಳು ಪಾಲ್ಗೊಳ್ಳುತ್ತಿವೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕಿನ ಕಾರಣದಿಂದಾಗಿ ಯೋಜಿತ ರೀತಿಯಲ್ಲಿ ವೈಭವಪೂರ್ಣವಾಗಿ ಮೈಸೂರು ದಸರಾ ಆಚರಣೆ ನಡೆದಿರಲಿಲ್ಲ. ಆದರೆ ಈ ಬಾರಿ ಕೋವಿಡ್ ಆತಂಕ ಬಹುತೇಕ ಕಣ್ಮರೆಯಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವಿಜೃಂಭಣೆಯಿAದ ಮೈಸೂರು ದಸರಾ ಆಚರಣೆಗೆ ಮುಂದಾಗಿದೆ. ಹೀಗಾಗಿಯೇ ಮೊದಲಿನಂತೆಯೇ ವೈಭವದಿಂದ ಜಂಬೂಸವಾರಿ ಕೂಡ ನಡೆಯಲಿದೆ.

ಈಗಾಗಲೇ ಮತ್ತಿಗೋಡು, ದುಬಾರೆ ಆನೆ ಶಿಬಿರದಿಂದ ಸಾಕಾನೆಗಳು ಅರಮನೆ ನಗರಿ ತಲುಪಿದ್ದು ತಾಲೀಮಿನಲ್ಲಿ ನಿರತವಾಗಿದೆ.

ಅರಮನೆ ಪ್ರಾಂಗಣದಲ್ಲಿ ಆಶ್ರಯ ಪಡೆದಿರುವ ಸಾಕಾನೆಗಳನ್ನು ನೋಡಲು ನೂರಾರು ಮಂದಿ ಬರುತ್ತಿದ್ದಾರೆ. ಸಂದರ್ಶಕರಿಗೆ ಕ್ಯಾಪ್ಟನ್ ಅಭಿಮನ್ಯು ಅತ್ಯಂತ ಆಕರ್ಷಕ ಆನೆಯಾಗಿ ಕಂಗೊಳಿಸಿದ್ದಾನೆ.

ಉಳಿದAತೆ ಈ ಮೊದಲು ಅಂಬಾರಿ ಆನೆಯಾಗಿ ಹೆಸರುವಾಸಿಯಾಗಿದ್ದ ಬಳ್ಳೆ ಶಿಬಿರದ ಅರ್ಜುನ, ಕಾವೇರಿ, ಧನಂಜಯ, ಗೋಪಾಲಸ್ವಾಮಿ ಆನೆಗಳೂ ಆಕರ್ಷಣೆ ಗಳಿಸಿವೆ.

ಖ್ಯಾತಿಯಲ್ಲಿ ಇಂದಿಗೂ ಎಲ್ಲರನ್ನೂ

(ಮೊದಲ ಪುಟದಿಂದ) ಮೀರಿಸಿರುವ ಅಭಿಮನ್ಯು ದೇಹದ ತೂಕದ ವಿಚಾರಕ್ಕೆ ಬಂದರೆ ನಾಲ್ಕನೇ ಸ್ಥಾನದಲ್ಲಿದ್ದಾನೆ. ಜಂಬೂಸವಾರಿಯ ಮಾಜಿ ನಾಯಕ ಅರ್ಜುನ ೫೬೬೦ ಕೆ.ಜಿ. ತೂಕವಿದ್ದರೆ, ಗೋಪಾಲಸ್ವಾಮಿ ೫೧೪೦ ಕೆಜಿ, ಧನಂಜಯ ೪೮೧೦ ಕೆ.ಜಿ., ಅಭಿಮನ್ಯು ೪೭೭೦ ಕೆ.ಜಿ., ಮಹೇಂದ್ರ ೪೨೫೦ ಕೆಜಿ, ಭೀಮ ೩೯೨೦ ಕೆಜಿ, ಕಾವೇರಿ ೩೧೦೦ ಕೆಜಿ, ಚೈತ್ರ ೩೦೫೦ ಕೆಜಿ, ಲಕ್ಷಿö್ಮ ೨೯೫೦ ಕೆಜಿ ತೂಕವಿದೆ.

ಈ ಸಂದರ್ಭದಲ್ಲಿ ಎಲ್ಲಾ ಆನೆಗಳು ಕನಿಷ್ಟ ೪೦೦ ರಿಂದ ೫೦೦ ಕೆಜಿ ತೂಕ ಹೆಚ್ಚಿಸಿಕೊಳ್ಳಲಿದೆ. ಸಾಕಾನೆ ಶಿಬಿರದಲ್ಲಿ ನೀಡಲಾಗುವ ಆಹಾರಕ್ಕಿಂತ ಈಗ ನಮ್ಮಲ್ಲಿ ನೀಡುವ ಆಹಾರದ ಪೌಷ್ಟಿಕಾಂಶ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಕೇವಲ ತೂಕ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ, ಆರೋಗ್ಯವನ್ನೂ ವೃದ್ಧಿಸಿಕೊಳ್ಳಬೇಕಾಗಿದೆ. ಹೀಗಾಗಿಯೇ ಈ ಆನೆಗಳಿಗೆ ನಾವು ಕಬ್ಬು, ಬೆಲ್ಲ, ದ್ರಾಕ್ಷಿ, ಕಲ್ಲುಸಕ್ಕರೆ, ಗೋಡಂಬಿ, ಬಾಳೆಹಣ್ಣು, ಅನ್ನ, ರಾಗಿಯ ಉಂಡೆ, ವಿವಿಧ ರೀತಿಯ ಸೊಪ್ಪುಗಳನ್ನು ಆಹಾರವಾಗಿ ನೀಡುತ್ತೇವೆ. ವೈದ್ಯರ ತಂಡ ಈ ಆನೆಗಳ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಹೀಗಾಗಿ ಜಂಬೂಸವಾರಿ ವೇಳೆಗೆ ಈ ೧೪ ಆನೆಗಳು ಕೂಡ ತೂಕದೊಂದಿಗೆ ಆರೋಗ್ಯದಲ್ಲಿಯೂ ಸಾಕಷ್ಟು ಸುಧಾರಣೆ ಹೊಂದಿರುತ್ತದೆ ಎಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ.ಮೈಸೂರು ದಸರಾ ಜಂಬೂಸವಾರಿಗೆ ಈ ಬಾರಿ ಮಹೇಂದ್ರ (೩೯) ವರ್ಷ), ಭೀಮ (೨೨) ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿದೆ. ಅಭಿಮನ್ಯು ಸೇರಿದಂತೆ ದಸರಾ ಆನೆಗಳು ೧೮ ರಿಂದ ೬೩ ವರ್ಷದೊಳಗಿನವು. ರಾಮಪುರ ಶಿಬಿರದ ೧೮ ವರ್ಷದ ಪಾರ್ಥಸಾರಥಿಯೇ ಕಿರಿಯ ಆನೆ.

ಕರ್ನಾಟಕದಲ್ಲಿ ೮ ಸಾಕಾನೆ ಶಿಬಿರಗಳಿದ್ದು ಈ ಶಿಬಿರಗಳಲ್ಲಿ ಒಟ್ಟು ೧೧೦ ಸಾಕಾನೆಗಳಿದೆ. ದಸರಾಕ್ಕೆ ಸಾಕಾನೆಗಳ ಆಯ್ಕೆ ನಡೆಸಬೇಕಾದ ಸಂದರ್ಭ ಆನೆಗಳ ಗುಣಸ್ವಭಾವ, ದೇಹದಾಡ್ಯತೆ, ಆರೋಗ್ಯ ಸ್ಥಿತಿ ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡಲಾಗುತ್ತದೆ. ೧೧೦ ಸಾಕಾನೆಗಳ ಪೈಕಿ ಪ್ರಥಮ ಹಂತದಲ್ಲಿ ೩೦ ಆನೆಗಳ ಪಟ್ಟಿ ಮಾಡಿಕೊಂಡು ಅಂತಿಮ ಹಂತದಲ್ಲಿ ೧೪ ಆನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ವಿದೇಯತೆ, ಜನರ ಗುಂಪಿಗೆ ಅಂಜದ ಸ್ವಭಾವ, ಸೌಮ್ಯ ನಡತೆ, ಗಾಂಭೀರ್ಯದ ಅಂಶ ಆನೆಗಳ ಆಯ್ಕೆಯಲ್ಲಿ ಪ್ರಧಾನವಾಗಿರುತ್ತದೆ ಎಂದೂ ಕರಿಕಾಳನ್ ಹೇಳಿದರು.

ಜಂಬೂಸವಾರಿಯಲ್ಲಿ ಎಷ್ಟೇ ಆನೆಗಳು ಪಾಲ್ಗೊಳ್ಳಲಿ ಅಂತಿಮವಾಗಿ ೭೫೦ ಕೆ.ಜಿ. ತೂಕವಿರುವ ಚಿನ್ನದ ಅಂಬಾರಿ ಹೊರುವ ಆನೆಗೇ ಹೆಚ್ಚಿನ ಪ್ರಾಶಸ್ತö್ಯ. ಸತತ ಮೂರನೇ ವರ್ಷ ಈ ಗೌರವ ಕೊಡಗಿನ ಆನೆಗಳ ಸರದಾರ ಕ್ಯಾಪ್ಟನ್ ಅಭಿಮನ್ಯುಗೆ ಸಲ್ಲುತ್ತಿದೆ.

ಸೌಮ್ಯ ಸ್ವಭಾವ, ಕೆಣಕಿದರೆ ಉಗ್ರಾವತಾರ, ಎಂಥ ಸವಾಲಿನ ಹೊಣೆ ನೀಡಿದರೂ ಕರಾರುವಕ್ಕಾಗಿ ನಿಭಾಯಿಸಬಲ್ಲ ನಾಯಕನ ಸ್ವಭಾವ ಹೊಂದಿರುವ ಅಭಿಮನ್ಯು ಭಾರತದಲ್ಲಿಯೇ ಅತ್ಯಂತ ಸಾಹಸಮಯ ಗುಣದ ಆನೆಯಾಗಿಯೂ ಖ್ಯಾತಿ ಹೊಂದಿದ್ದಾನೆ.

ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಹೆಸರುವಾಸಿಯಾಗಿರುವ ಅಭಿಮನ್ಯು ಈವರೆಗೆ ೧೫೦ ಕ್ಕೂ ಅಧಿಕ ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡ ಹಿರಿಮೆಗೆ ಪಾತ್ರನಾಗಿದ್ದಾನೆ. ಆನೆಗಳ ಸೆರೆ ಮಾತ್ರವಲ್ಲದೇ ಹುಲಿಗಳ ಸೆರೆ ಕಾರ್ಯಾಚರಣೆಯಲ್ಲಿಯೂ ಪಾಲ್ಗೊಂಡು ಯಶಸ್ವಿಯಾದ ಕೀರ್ತಿ ಅಭಿಮನ್ಯುವಿನದ್ದು. ದಕ್ಷಿಣ ಭಾರತದ ಕಾಡಿನಲ್ಲಿ ಮಾತ್ರವಲ್ಲದೇ ಉತ್ತರ ಭಾರತದ ಕಾನನಗಳಲ್ಲಿಯೂ ವ್ಯಾಘ್ರನ ಸೆರೆ ಕಾರ್ಯಾಚರಣೆಯಲ್ಲಿ ಅಭಿಮನ್ಯು ಪಾಲ್ಗೊಂಡಿದ್ದಾನೆ.

ಅಭಿಮನ್ಯುವಿನ ಮಾವುತ ಮತ್ತಿಗೋಡು ಶಿಬಿರದ ವಸಂತ ಈ ಬಾರಿ ಕೂಡ ತನ್ನ ನೆಚ್ಚಿನ ಆನೆಯ ಸಾರಥಿಯಾಗಿ ಕ್ಯಾಪ್ಟನ್ ನ್ನು ನಾಡಹಬ್ಬದ ಮೆರವಣಿಗೆಯಲ್ಲಿ ಮುನ್ನಡೆಸಲಿದ್ದಾನೆ.

ಜಂಬೂಸವಾರಿಯ ಮಾಜಿ ನಾಯಕ ಅರ್ಜುನ ಈ ಬಾರಿ ಮೆರವಣಿಗೆಯ ಮುಂಚೂಣಿ ಆನೆಯಾದ ನಿಶಾನೆ ಆನೆಯಾಗಿ ಹೆಜ್ಜೆ ಇರಿಸಲಿದ್ದಾನೆ. ಅರ್ಜುನ ಮುಂದೆ ಸಾಗಿದಂತೆಯೇ ಜಂಬೂಸವಾರಿಯ ನಡುವೇ ಚಿನ್ನದಂಬಾರಿ ಹೊತ್ತು ಮತ್ತಿಗೋಡಿನ ಅಭಿಮನ್ಯು ಗಾಂಭೀರ್ಯದಿAದ ಹೆಜ್ಜೆ ಹಾಕಲಿದ್ದಾನೆೆ. ಈ ಮೂಲಕ ಕೊಡಗಿನ ಆನೆ ಕ್ಯಾಂಪ್‌ನ ಗಜ ಪರಿವಾರಕ್ಕೆ ಮತ್ತೊಮ್ಮೆ ಕೀರ್ತಿ ತರಲಿದ್ದಾನೆ.