ಶನಿವಾರಸಂತೆ, ಸೆ. ೧: ಸಮೀಪದ ಆಲೂರುಸಿದ್ದಾಪುರ ಗ್ರಾಮದ ವಿಜಯ ಯುವಕ ಸಂಘದ ವತಿಯಿಂದ ತಾ. ೩ ರಂದು ಕೈಲ್ಮುಹೂರ್ತ ಹಬ್ಬದ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ತಾ. ೩ ರಂದು ಬೆಳಿಗ್ಗೆ ೯.೩೦ ಕ್ಕೆ ನಡೆಯುವ ಕ್ರೀಡಾಕೂಟವನ್ನು ಮುಖ್ಯಶಿಕ್ಷಕ ಎಸ್.ಕೆ. ಉದಯ್ ಉದ್ಘಾಟಿಸುತ್ತಾರೆ. ಸಂಘದ ಸಲಹೆಗಾರ ಕೋಳಿಬೈಲ್ ವೆಂಕಟೇಶ್, ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಶಿವಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುವರ್ಣಾ ಪಾಲ್ಗೊಳ್ಳುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪುದಿಯನೆರವನ ಪ್ರದೀಪ್ ವಹಿಸುವರು. ದಂಡಿನ ಡಾ. ಮೋನಿಷ್ ಉತ್ತಯ್ಯ ಅವರು ಆರೋಗ್ಯ ರಕ್ಷಣೆ ಮತ್ತು ಕ್ರೀಡೆಯಲ್ಲಿ ಯುವಜನರ ಪಾತ್ರ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಭಾಗಮಂಡಲದ ಸಮಾಜಸೇವಕ ಎ. ರಾಮಕೃಷ್ಣ ಕೈಲ್ ಮುಹೂರ್ತ ಹಬ್ಬದ ಬಗ್ಗೆ ಮಾತನಾಡುವರು.
ಕಾರ್ಯಕ್ರಮದಲ್ಲಿ ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚುರಂಜನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್, ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ, ಸಮಾಜ ಸೇವಕ ಮಂಥರ್ಗೌಡ, ಉದ್ಯಮಿ ನಾಪಂಡ ಮುತ್ತಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.