ಕುಶಾಲನಗರ, ಸೆ. ೧: ಬೈಕೊಂದು ಡಿಕ್ಕಿಯಾಗಿ ತೀವ್ರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಅಪರಿಚಿತ ವೃದ್ಧರೊಬ್ಬರಿಗೆ ಆರೈಕೆ ಮಾಡಿ ಚಿಕಿತ್ಸೆ ನೀಡುವ ಮೂಲಕ ನಿವೃತ್ತ ಅರಣ್ಯ ಅಧಿಕಾರಿ ಒಬ್ಬರು ಮಾನವೀಯತೆ ಮೆರೆದ ಘಟನೆ ಕುಶಾಲನಗರ ಸಮೀಪ ಬಾಣಾವರದಲ್ಲಿ ನಡೆದಿದೆ.

ಹೆಬ್ಬಾಲೆ ಬಾಣಾವರ ಮುಖ್ಯ ರಸ್ತೆಯ ಅಳುವಾರ ಬಳಿ ಭೈರಪ್ಪನ ಗುಡಿ ಎಂಬಲ್ಲಿ ಅಲ್ಲಿನ ನಿವಾಸಿ ವೆಂಕಟೇಶ ಎಂಬ ವೃದ್ಧರಿಗೆ ದ್ವಿಚಕ್ರ ವಾಹನ ಡಿಕ್ಕಿಪಡಿಸಿ ಸವಾರ ಪರಾರಿಯಾಗಿದ್ದ. ಇದೇ ಸಂದರ್ಭ ಈ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ನಿವೃತ್ತ ವಲಯ ಅರಣ್ಯ ಅಧಿಕಾರಿ, ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎಸ್. ಚಿಣ್ಣಪ್ಪ ಅವರು ಇದನ್ನು ಗಮನಿಸಿ ಕೂಡಲೇ ಗಾಯಗೊಂಡ ವೃದ್ಧನ ನೆರವಿಗೆ ಧಾವಿಸಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುವಿಗೆ ಆರೈಕೆ ಮಾಡಿ ನಂತರ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.