ಮಡಿಕೇರಿ, ಸೆ. ೧: ದಿನವಿಡೀ ಬಿಸಿಲಿನಿಂದ ಕಾದಿದ್ದ ಮಡಿಕೇರಿಯಲ್ಲಿ ಸಂಜೆ ೫ ಗಂಟೆ ವೇಳೆಗೆ ಸುರಿದ ಗುಡುಗು ಸಹಿತ ದಿಢೀರ್ ಮಳೆಗೆ ನಗರದಾದ್ಯಂತ ಅವಾಂತರ ಸೃಷ್ಟಿಯಾಗಿತ್ತು. ಮಳೆಯ ರಭಸಕ್ಕೆ ಚರಂಡಿಗಳು ಕಟ್ಟಿಕೊಂಡು ಹಲವು ಬಡಾವಣೆಗಳು ಮುಳುಗಡೆಗೊಂಡವು. ಅಂಗಡಿ - ಮಳಿಗೆ, ಮನೆಗಳಿಗೆ ನೀರು ನುಗ್ಗಿ ನಾಗರಿಕರು ಪರದಾಡುವಂತಾಗಿತ್ತು.

(ಮೊದಲ ಪುಟದಿಂದ) ಸಂಜೆ ವೇಳೆ ದಿಢೀರನೇ ಸುರಿದ ಮಳೆ ಎಡೆಬಿಡದೆ ಅರ್ಧ ಗಂಟೆÀಗಳ ಕಾಲ ಸುರಿಯಿತು. ಮಳೆಯ ತೀವ್ರತೆಗೆ ನಗರದಲ್ಲಿ ಹರಿಯುವ ತೋಡು - ಚರಂಡಿಗಳು ತುಂಬಿಕೊAಡು ನೀರು ರಸ್ತೆ ಮೇಲೆ ಹರಿಯಲಾರಂಭಿಸಿತು. ನಗರದ ಪ್ರಮುಖ ಬಡಾವಣೆಗಳಾದ ಕೈಗಾರಿಕಾ ಬಡಾವಣೆ, ವಿನಾಯಕ ಬಡಾವಣೆ, ಪ್ರಕೃತಿ ಬಡಾವಣೆ, ಕಾವೇರಿ ಮುಳಿಯ ಬಡಾವಣೆಗಳಲ್ಲಿ ಜಲಾವೃತಗೊಂಡು ನೀರು ಕೈಗಾರಿಕಾ ಘಟಕಗಳು, ಕಾವೇರಿ ಹಾಲ್, ವಿನಾಯಕ ಮಿಲ್ ಸೇರಿದಂತೆ ಬಡಾವಣೆಗಳ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಪ್ರಕೃತಿ ಹಾಗೂ ಮುಳಿಯ ಬಡಾವಣೆಗಳಲ್ಲಿ ವಾಹನಗಳು ನೀರಿನಲ್ಲಿ ಮುಳುಗಡೆಗೊಂಡವು. ವಿನಾಯಕ ಬಡಾವಣೆಯಲ್ಲಿರುವ ಅಕ್ಕಿ ಗಿರಣಿ ಒಳಗಡೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ತಡೆಗೋಡೆ ಇರುವ ಮಂಗಳೂರು ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳಲ್ಲೂ ನೀರು ನದಿಯಂತೆ ಉಕ್ಕಿ ಹರಿಯುತ್ತಿತ್ತು.

ಮಳೆಯ ಅವಾಂತರ ಸೃಷ್ಟಿಯಾಗುತ್ತಿದ್ದಂತೆ ನಗರಸಭಾ ಅಧ್ಯಕ್ಷರ ಸೂಚನೆ ಮೇರೆಗೆ ಮಡಿಕೇರಿ ನಗರಸಭಾ ಆಯುಕ್ತ ಪ್ರಸಾದ್, ಸ್ಥಾಯಿಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಸದಸ್ಯರುಗಳಾದ ಅಪ್ಪಣ್ಣ, ಸತೀಶ್, ರಾಜೇಶ್ ಯಲ್ಲಪ್ಪ, ಅರುಣ್ ಶೆಟ್ಟಿ, ಅಭಿಯಂತರ ಶಮಂತ್, ಅಧಿಕಾರಿಗಳಾದ ತಾಹಿರ್, ಸಿಬ್ಬಂದಿ ಓಬಳಿ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಂಡರು. ಮುಳುಗಡೆಗೊಂಡ ಸ್ಥಳಗಳಿಗೆ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ತಹಶೀಲ್ದಾರ್ ಮಹೇಶ್, ಅಧಿಕಾರಿ ತಂಡದವರು, ಅನನ್ಯಕುಮಾರ್ ನೇತೃತ್ವದ ಎನ್‌ಡಿಆರ್‌ಎಫ್ ತಂಡದವರು ಭೇಟಿ ನೀಡಿ ಪರಿಶೀಲನೆ ಮಾಡಿ ಮುಂಜಾಗ್ರತಾ ಕ್ರಮಕೈಗೊಂಡರು.