ಸೋಮವಾರಪೇಟೆ, ಸೆ.೧: ಕಳೆದ ತಿಂಗಳ ೨೯ರಂದು ನಡೆದ ಗುಂಡೇಟು ಪ್ರಕರಣವನ್ನು ಸಂಪೂರ್ಣವಾಗಿ ಭೇದಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದು, ಜೊತೆಗಾರನ ಗುಂಡಿಗೆ ಬೇಟೆಗಾರ ಬಲೆಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ.

ಆ.೨೯ ರಂದು ಯಡವಾರೆ ಗ್ರಾಮದ ಎಂ.ಬಿ.ಶಿವಕುಮಾರ್ ಹಾgU ಇತರ ಐದು ಮಂದಿ ಚಾಮರಾಜನಗರಕ್ಕೆ ಬೇಟೆಗೆ ತೆರಳಿದ್ದರು. ಬೇಟೆಯಾಡುವ ಸಂದರ್ಭ ಕಾಡುಹಂದಿಗೆ ಹೊಡೆದ ಗುಂಡು ಶಿವಕುಮಾರ್(೫೮) ಎಂಬವರ ಕುತ್ತಿಗೆಗೆ ತಗುಲಿ ಮೃತಪಟ್ಟಿದ್ದರು.

ಮೃತರ ಪುತ್ರ ನಿರೀಕ್ಷಿತ್ ನೀಡಿದ ದೂರಿನನ್ವಯ ಆ. ೩೦ರಂದು ತಾಲೂಕಿನ ಬೇಳೂರುಬಾಣೆ ಸಮೀಪದಲ್ಲಿ ಮೃತದೇಹ ಮತ್ತು ನಾಲ್ವರು ಆರೋಪಿ ಬೇಟೆಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಆರೋಪಿಗಳನ್ನು ತಾ. ೩೦ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದಿದ್ದರು. ಇದೀಗ ವಿಚಾರಣೆ ಪೂರ್ಣಗೊಂಡಿದ್ದು, ಮತ್ತೆ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಚಾಮರಾಜನಗರಕ್ಕೆ ಬೇಟೆಗೆ ತೆರಳಿದ್ದ ತಾಕೇರಿ ಗ್ರಾಮದ ಎ.ಎಸ್.ನಂದೀಶ್, ಎ.ಆರ್.ಮಂಜುನಾಥ್, ಐಗೂರು ಗ್ರಾಮದ ಚೇತನ್, ಚನ್ನಕೇಶವ ಎಂಬವರನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸಿದ ಸಂದರ್ಭ ನಂದೀಶ್ ಹಾರಿಸಿದ ಗುಂಡಿನಿAದ ಶಿವಕುಮಾರ್ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ. ಮತ್ತೋರ್ವ ಆರೋಪಿ ಕಿರಗಂದೂರು ಗ್ರಾಮದ ರವಿಕುಮಾರ್ ತಲೆಮರೆಸಿಕೊಂಡಿದ್ದಾನೆ.

ಸೋಮವಾರಪೇಟೆ ಠಾಣಾಧಿಕಾರಿ ರಮೇಶ್ ಕುಮಾರ್ ಅವರು ಮೊಕದ್ದಮೆ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ರವಿಕುಮಾರ್ ಪತ್ತೆಗೆ ಬಲೆ ಬೀಸಲಾಗಿದೆ. ಆರಂಭದಲ್ಲಿ ತಾಲೂಕಿನ ಗರ್ವಾಲೆ ವ್ಯಾಪ್ತಿಯಲ್ಲಿ ಬೇಟೆಗೆ ತೆರಳಿದ್ದ ಸಂದರ್ಭ ದುರ್ಘಟನೆ ನಡೆದಿದೆ ಎಂದೇ ಬಿಂಬಿಸಲಾಗಿತ್ತು. ಇದೀಗ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿ ಚಾಮರಾಜನಗರದಲ್ಲಿ ಘಟನೆ ನಡೆದಿರುವುದಾಗಿ ಪ್ರಥಮ ವರ್ತಮಾನ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.